ಹೂವಿನಹಗಡಲಿ: ಮಹಿಳೆಯರು ತಮಗಾಗಿ ಇರುವ ಕಾನೂನು ಬಗ್ಗೆ ತಿಳಿದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಉನ್ನತ ಸ್ಥಾನ ಪಡೆಯಲು ಮುಂದಾಗಬೇಕು ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ ಹಾಗೂ ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿನ ಕಾನೂನು ಮತ್ತು ಮೂಲಭೂತ ಹಕ್ಕುಗಳನ್ನು ಮಹಿಳೆಯರು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿನಿಯು ಕಾನೂನಿನ ಅರಿವಿನಿಂದ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ, ಜನನ ಮತ್ತು ಮರಣ ನೋಂದಣಿ, ಸಂವಿಧಾನದ ಅಡಿಯಲ್ಲಿ ಬರುವ ಕಾಯ್ದೆಗಳ ಮಾಹಿತಿ ಪಡೆದು, ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.
ನಿವೃತ್ತ ಸರ್ಕಾರಿ ಅಭಿಯೋಜಕ ಕಾಳಿಂಗರಾವ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತಕುಮಾರ ಜಿ, ವಕೀಲರಾದ ಸಿದ್ದನಗೌಡ, , ಪ್ರಾಚಾರ್ಯ ಚಂದ್ರೆಗೌಡ, ಬಿಇಒ ಮಹೇಶ್ ಪೂಜಾರ, ಸಿಡಿಪಿಒ ಅವಿನಾಶ್ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು.