ಜಿಲ್ಲೆ

ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ್ದರೂ ಶೋಷಣೆ ನಿಂತಿಲ್ಲ

Kodagu

ಸೋಮವಾರಪೇಟೆ: ಭಾರತದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದರೂ ಶೋಷಣೆ ನಿಂತಿಲ್ಲ ಎಂದು ಆಯುರ್ವೇದ ತಜ್ಞ ವೈದ್ಯೆ ಕೆ.ಎಸ್. ಶ್ವೇತಾ ಬೇಸರ ವ್ಯಕ್ತಪಡಿಸಿದರು.


ಪಟ್ಟಣದ ಮಹಿಳಾ ಸಹಕಾರ ಸಂಘದ ವತಿಯಿಂದ ಸಮಾಜದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಸದುಪಯೋಗಪಡಿಸಿಕೊಂಡು, ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.


ಹೆಣ್ಣುಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಶಿಕ್ಷಣದ ಸಂದರ್ಭದಲ್ಲೇ ಹೆಣ್ಣು ಮಕ್ಕಳು ಲೈಂಗಿಕ ಶೋಷಣೆಗೆ ತುತ್ತಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಕಾನೂನಿನ ಸದ್ಬಳಕೆಯಿಂದ ಶೋಷಣೆ ಮುಕ್ತರಾಗಬೇಕಿದೆ. ಅಲ್ಲದೆ, ಮಹಿಳೆಯರು ರಕ್ಷಣೆಗೆ ಸ್ವ ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಲೀಲಾ ನಿರ್ವಾಣಿ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಸುರೇಶ್, ಜಲಜಾಶೇಖರ್, ಗಾಯತ್ರಿ ನಾಗರಾಜ್, ಗೀತಾರಾಜು, ಚಂದ್ರಕಲಾ ಗಿರೀಶ್, ದಾಕ್ಷಾಯಿಣಿ ಶಿವಾನಂದ, ಶೈಲಾ ವಸಂತ್, ವರಲಕ್ಷ್ಮೀ ಸಿದ್ದೇಶ್ವರ್, ಅಮಿತಾ ಪ್ರದೀಪ್ ಇದ್ದರು.