ಜಿಲ್ಲೆ

ಮಹಿಳೆಯರಲ್ಲಿ ಅರಿವು ಮೂಡಿಸುವುದೇ ಸಂಸ್ಥೆಯ ಉದ್ದೇಶ: ಸದಾಶಿವ ಕುಲಾಲ್

ಚನ್ನರಾಯಪಟ್ಟಣ: ಗ್ರಾಮೀಣ ಮಹಿಳೆಯರಿಗೆ ಕಾನೂನು, ಆರೋಗ್ಯ, ವ್ಯಾಪಾರ ಹಾಗೂ ಶಿಕ್ಷಣ ಸೇರಿದಂತೆ ಪ್ರಪಂಚದ ಮಾಹಿತಿಯನ್ನು ತಿಳಿಸಿಕೊಡುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಎಂದು ಶ್ರವಣಬೆಳಗೊಳ ವೃತ್ತದ ಯೋಜನಾಧಿಕಾರಿ ಸದಾಶಿವ ಕುಲಾಲ್ ಹೇಳಿದರು.


ತಾಲೂಕಿನ ಬೂಕ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವನಸಿರಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದರು.


ಯಾರಲ್ಲಿಯೂ ಹೇಳಿಕೊಳ್ಳಲಾಗದ ಮಹಿಳೆಯರ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ವೈದ್ಯರು ಹಾಗೂ ವಕೀಲರು ಸೇರಿದಂತೆ ಎಲ್ಲಾ ವಿಭಾಗದ ತಜ್ಞರ ತಂಡ ಈ ಕೇಂದ್ರದಲ್ಲಿ ಇರುತ್ತದೆ ಎಂದು ತಿಳಿಸಿದರು.


ಜ್ಞಾನ ವಿಕಾಸದ ಕೇಂದ್ರ ಸಂಪನ್ಮೂಲ ಸಮನ್ವಯಾಧಕಾರಿ ಕನಕ ಮಾತನಾಡಿ, ಹಿರೀಸಾವೆಯ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿಯ 35 ವಿದ್ಯಾರ್ಥಿನಿಯರಿಗೆ ನುರಿತ ಶಿಕ್ಷಕರಿಂದ ವಿಶೇ? ತರಗತಿಗಳನ್ನು ನಡೆಸಲಾಗುವುದು. ಇದಕ್ಕೆ 10 ಸಾವಿರ ರೂ. ಅನುದಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನೀಡಲಾಗುವುದು ಎಂದರು.


ಶಿಕ್ಷಕ ರಾಮೇಗೌಡ, ಒಕ್ಕೂಟದ ಅಧ್ಯಕ್ಷೆ ರಾಜಮ್ಮ, ಅಂಗನವಾಡಿ ಶಿಕ್ಷಕಿ ನಾಗಮಣಿ, ಯೋಜನೆಯ ಸೇವಾ ಪ್ರತಿನಿಧಿಗಳಾದ ಚಂದ್ರಕಲಾ, ಆಶಾ ಹಾಗೂ ಇತರರು ಇದ್ದರು.