ಮೈಸೂರು: ಮಹಿಳೆಯರ ಅಭಿವೃದ್ಧಿ ಇಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಇಂದುಮತಿ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳೆ ಆರೋಗ್ಯ ಮತ್ತು ಸ್ವಚ್ಚತೆ’ ಬಗ್ಗೆ ಕಾರ್ಯಾಗಾರವನ್ನು ಉದ್ಛಾಟಿಸಿ ಮಾತನಾಡಿದರು.
ಎಲ್ಲಿ ಮಹಿಳೆಯರನ್ನು ಗೌರವಿಸುವುದಿಲ್ಲವೊ ಆ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಮಗುವಿನ ಬೆಳವಣಿಗೆ, ಸಂಸ್ಕೃತಿಯಲ್ಲಿ ಮಹಿಳೆಯ ಪಾತ್ರ ಹಿರಿದು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆರ್ಥಿಕವಾಗಿ, ಸಾಮಾಜಿಕವಾಗಿ ಅಲ್ಲದೆ ಬಹುಮುಖ್ಯವಾಗಿ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ. ಮಹಿಳೆಯರು ವಿದ್ಯಾವಂತರಾದರೆ ಆರೋಗ್ಯದ ಬಗ್ಗೆ ಅರಿವು ಉಂಟಾಗುತ್ತದೆ. ಮಹಿಳೆಯರಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಬೇಕಿದೆಯೇ ಹೊರತು ಅನುಕರಣೆಯಲ್ಲ. ಉತ್ತಮ ಆಹಾರ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
‘ಮಹಿಳೆಯರ ಲೈಂಗಿಕ ಆರೋಗ್ಯ’ ಕುರಿತು ಮಾತನಾಡಿದ ಲೈಂಗಿಕ ಶಾಸ್ತ್ರಜ್ಞ ಡಾ.ಸಿ.ಶರತ್ ಕುಮಾರ್ ಅವರು, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಲೈಂಗಿಕ ಆರೋಗ್ಯವು ಸ್ವಾಭಿಮಾನ, ವೈಯಕ್ತಿಕ ಆಕರ್ಷಣೆ ಮತ್ತು ಸಾಮರ್ಥ್ಯವಾಗಿದೆ. ಇದರ ಬಗ್ಗೆ ಮಡಿವಂತಿಕೆ ಬಿಟ್ಟು ತಿಳಿವಳಿಕೆ ಹೊಂದುವುದು ಹಲವು ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ. ಲೈಂಗಿಕ ಆರೋಗ್ಯವು ಮನುಷ್ಯನ ಧನಾತ್ಮಕ ಶಕ್ತಿಯಾಗಿ ದೃಢೀಕರಿಸುತ್ತದೆ. ನಮ್ಮ ಮುಕ್ತತೆ ಹಲವು ಬಹುತೇಕ ಸಮಸ್ಯೆಗಳ ನಿರ್ಮೂಲನೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಶಿಕ್ಷಣ ಪಡೆದುಕೊಂಡಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ. ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಉತ್ತಮ ಆಹಾರ ಸೇವನೆ ಮುಖ್ಯವಾಗಿದೆ ಎಂದರು
ಪ್ರಾಂಶುಪಾಲ ಡಾ.ರೇಚಣ್ಣ, ರೇಂಜರ್ಸ್ ಆ್ಯಂಡ್ ರೋವರ್ಸ್ ಲೀಡರ್‌ಗಳಾದ ಡಾ. ಎಸ್.ಚೈತ್ರಾ, ಕುಮಾರಿ ಡಿ.ಜಿ. ಪಲ್ಲವಿ, ಸಹಾಯಕ ಪ್ರಾಧ್ಯಾಪಕಿ ಡಾ.ರೂಪಾ ಉಪಸ್ಥಿತರಿದ್ದರು.
ನಂತರ ನಡೆದ ಗೋಷ್ಠಿಯಲ್ಲಿ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಕೆ.ಸೌಮ್ಯಾ ಅವರು ‘ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ’, ಆಹಾರ ತಜ್ಞ ಡಾ.ಪಿ.ಪೃಥ್ವಿ ಅವರು ’ಆಹಾರ ಮತ್ತು ಪೋಷಣೆ’ ಕುರಿತು ಅರಿವು ಮೂಡಿಸಿದರು. ನಂತರ ’ಮಾನಸಿಕ ಆರೋಗ್ಯ’ ಕುರಿತು ಮೈಸೂರು ವೈದ್ಯಕೀಯ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎನ್.ರವೀಶ್ ಅವರು ಮೌಲಿಕ ವಿಚಾರಗಳ ಕುರಿತು ಮಾತನಾಡಿದರು.
*12
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳೆ ಆರೋಗ್ಯ ಮತ್ತು ಸ್ವಚ್ಚತೆ’ ಬಗ್ಗೆ ಕಾರ್ಯಾಗಾರವನ್ನು ನಿವೃತ್ತ ಕುಲಪತಿ ಡಾ.ಎಸ್. ಇಂದುಮತಿ ಉದ್ಛಾಟಿಸಿದರು. ಡಾ.ಸಿ.ಶರತ್ ಕುಮಾರ್, ಬಿ. ನಿರಂಜನ ಮೂರ್ತಿ, ಡಾ.ರೇಚಣ್ಣ ಇನ್ನಿತರರಿದ್ದರು.