ಕೊಳ್ಳೇಗಾಲ ಪಟ್ಟಣದ ಶ್ರೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ಅಕ್ಷರದಾತೆ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಎನ್.ಮಹೇಶ್, ಶಿಕ್ಷಕರು ಇದ್ದಾರೆ. 
ಜಿಲ್ಲೆ

ಮಹಿಳೆಯರ ಶಿಕ್ಷಣಕ್ಕಾಗಿ ದೊಡ್ಡ ಕ್ರಾಂತಿ

Chamarajanagar

ಕೊಳ್ಳೇಗಾಲ: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಶಾಲೆ ತೆರೆದು ಮಹಿಳೆಯರಿಗೆ ಶಿಕ್ಷಣ ನೀಡುವಂತಹ ದೊಡ್ಡ ಕ್ರಾಂತಿ ಮಾಡಿದವರು ಮಾತೆ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಎನ್.ಮಹೇಶ್ ಬಣ್ಣಿಸಿದರು.

ಪಟ್ಟಣದ ಗುರುಭವನದ ಆವರಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಶಿಕ್ಷಕರು ಆಯೋಜಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.

ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರಿಗೆ ಶಾಲೆ ತೆರದು ಶಿಕ್ಷಣ ನೀಡುವಂತಹ ಮಹಾ ಕೆಲಸಕ್ಕೆ ಅಡಿಗಲ್ಲಿಟ್ಟವರು ಮಾತೆ ಸಾವಿತ್ರಿಬಾಯಿ ಫುಲೆ. ಅವರು ಬಿತ್ತಿದ ಅಕ್ಷರ ಬೀಜ ಇದೀಗ ಎಷ್ಟು ದೊಡ್ಡ ಸಾಧನೆ ಮಾಡಿದೆ ಎಂದರೆ, ಮಹಿಳೆಯರು ಶಿಕ್ಷಣ ಪಡೆಯುವುದಕ್ಕೆ ಅರ್ಹರಲ್ಲ ಎಂಬ ವ್ಯವಸ್ಥೆಯಿದ್ದ ಕಾಲದಲ್ಲಿ ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂಬ ಸಂವಿಧಾನಿಕ ಕಾಯ್ದೆಗಳು ಜಾರಿಯಾಗಿದೆ ಎಂದರು.

ದೇಶದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.60ರಷ್ಟಿದೆ. ಸಾಕ್ಷರತೆ ಪಡೆಯುವ ದಿಕ್ಕಿನಲ್ಲಿ ಬಹಳ ಮಹಿಳೆಯರು ವೇಗವಾಗಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರು ಹಕ್ಕಿಗಾಗಿ ಹಾಗೂ ಅವರಿಗಿದ್ದ ನಿರ್ಬಂಧಗಳನ್ನು ಬಗೆಹರಿಸಲು ಮಾತೆ ಸಾವಿತ್ರಿಬಾಯಿ ಫುಲೆ ಹೋರಾಟ ಮಾಡಿದ್ದಾರೆ. ಅಂತೆಯೇ, ಅವರ ಪತಿ ಮಹಾತ್ಮ ಜ್ಯೋತಿಬಾಫುಲೆ ಸಾಥ್ ನೀಡಿದ್ದರು ಎಂದು ತಿಳಿಸಿದರು.

ಸುದೀರ್ಘವಾದ ಹೋರಾಟದ ಪರಿಣಾಮವಾಗಿ 90ರ ದಶಕದಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತ 1 ಸಾವಿರ ಪುರುಷರಿಗೆ 930 ಮಹಿಳೆಯರಿದ್ದರು. ಆದರೆ, 2020 ವರದಿ ಪ್ರಕಾರ 1 ಸಾವಿರ ಪುರುಷರಿಗೆ 1020 ಮಹಿಳೆಯರಿದ್ದಾರೆ. ಇದಕ್ಕೆ ಕಾರಣವೇನೆಂದರೆ ಮಹಿಳೆಯರಲ್ಲಿ ನಡುವೆ ನಡೆದ ಜಾಗೃತಿ, ಆರೋಗ್ಯದ ಕಾಳಜಿಯಾಗಿದೆ. ವಿಶೇಷವಾಗಿ ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಬಂದ ಮೇಲೆ ಇಂತಹ ದೊಡ್ಡ ಬದಲಾವಣೆ ದೇಶದಲ್ಲಿ ಆಗಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಪರವಾದ ಶಾಸನಗಳನ್ನು ರಚನೆ ಮಾಡಲು ಸಾವಿತ್ರಿಬಾಯಿ ಫುಲೆ ಕಾರಣಕರ್ತರಾಗಿದ್ದಾರೆ. ಅವರ ಜನ್ಮದಿನ ಇಡೀ ಮಹಿಳೆಯರ ಸ್ವಾಭಿಮಾನ, ಸ್ವಾವಲಂಬನೆಯ ದಿನವಾಗಿದೆ ಎಂದರು.

ನಗರಸಭೆ ಸದಸ್ಯ ರಾಮಕೃಷ್ಣ, ನಾಸೀರ್ ಶರೀಫ್, ಮುಖಂಡ ಜಗದೀಶ್, ಅಕ್ಷರ ದಾಸೋಹ ರಂಗಸ್ವಾಮಿ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷ ಸಾವಿತ್ರಿ, ಉಪಾಧ್ಯಕ್ಷೆ ಹೂವಮ್ಮ, ರಾಜ್ಯ ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಚಿಕ್ಕರಾಜು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಧ ಅದ್ಯಕ್ಷ ಶ್ರೀಧರ್, ಸಿದ್ದರಾಜು, ಬಿ.ಆರ್.ಪಿ ಬಸವರಾಜು, ಶಿಕ್ಷಕ ವೃಂದ ಹಾಜರಿದ್ದರು.