ಹಾಸನ : ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.50 ರಷ್ಟು ಪ್ರಾತಿನಿಧಿಕ ಮೀಸಲಾತಿ ಮಸೂದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಮಹಿಳೆಯರು ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಜಿವಿಎಸ್ ಜಿಲ್ಲಾ ಸಂಚಾಲಕಿ ಮಮತಾ ಶಿವು ಮಾತನಾಡಿ, ನಾವೀಗ ಭಾರತ ಸ್ವಾತಂತ್ರೃದ ಅಮೃತಮಹೋತ್ಸವದ ಕಾಲಘಟ್ಟದಲ್ಲಿದ್ದು, ಸ್ವಾತಂತ್ರೃ, ಸಮಾನತೆ, ಭ್ರಾತೃತ್ವದ ಆಶದೊಂದಿಗೆ ಜೀವಿಸುತ್ತಿದ್ದೇವೆ. ಆದರೆ, ಮಹಿಳೆಯರು ಇನ್ನೂ ದೌರ್ಜನ್ಯ, ಅಸುರಕ್ಷತೆ, ಹಿಂಸೆಯನ್ನು ಎದುರಿಸುತ್ತಿದ್ದಾರೆ. ಹೆಣ್ಣು-ಗಂಡು ನಡುವೆ ಅಸಮತೋಲನ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಳ ಸಮುದಾಯ ಮತ್ತು ಹಿಂದುಳಿದ ಸಮುದಾಯಗಳಿಗೆ ನೀಡಿದ್ದ ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತಿದೆ. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಆದ್ದರಿಂದ ಸರ್ಕಾರಗಳು ಹಾಗು ರಾಜಕೀಯ ಪಕ್ಷಗಳು ಮಹಿಳಾ ಸಬಲಿಕರಣ, ಸ್ವಾವಲಂಬನೆಗೆ ಪೂರಕವಾದ ನೀತಿ-ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ಜೊತೆಗೆ ಆರ್ಥಿಕ ಸ್ವಾವಲಂಬನೆ ಮತ್ತು ಸಮಾನತೆಗಾಗಿ ಗುತ್ತಿಗೆ, ತಾತ್ಕಾಲಿಕ ಪದ್ಧತಿಗೆ ಬದಲಾಗಿ ಸಮಗ್ರ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆಯೊಂದಿಗೆ ಪಠ್ಯಕ್ರಮದಲ್ಲೂ ಮಹಿಳಾ ಪ್ರಧಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮಹಿಳೆಯರ ಆರೋಗ್ಯ ಬಲವರ್ಧನೆ ವ್ಯವಸ್ಥಿತವಾಗಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಅಮಾನವೀಯ ದೃಷ್ಟ ಪದ್ಧತಿ, ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆಗೆ ಸಮಿತಿ ರಚಿಸಿ ಜನಜಾಗೃತಿಗೆ ಯೋಜನೆ ಜಾರಿಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯತಿಗಳಲ್ಲೂ ವೈಜ್ಞಾನಿಕ ಕಸ ನಿರ್ವಹಣಾ ಘಟಕ ನಿರ್ಮಾಣ ಮತ್ತು ನಿರ್ವಹಣೆ ಮಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಿಸುವ ಘಟಕಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರೇರಣಾ ವಿಕಾಸ ವೇದಿಕೆ, ಸ್ನೇಹ ಸಂಪದ ಮಹಿಳಾ ಸಮಿತಿ, ಜನನಿ ಫೌಂಡೇಶನ್, ಮನಸ್ವಿ ರಾಜ್ಯ ಮಹಿಳಾ ಉದ್ದಿಮೆದಾರರ ಸಂಘ, ವೈಷ್ಣವಿ ಚಾರಿಟಬಲ್ ಟ್ರಸ್ಟ್, ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.