ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಸೋಮವಾರ ಸಿರಿ ಸಾಂಸ್ಕೃತಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ವನಿತಾಲೋಕ ಆಶ್ರಯದಲ್ಲಿ ಒಂದು ತಿಂಗಳ ಕಾಲ ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿಧ ಕೌಶಲ ತರಬೇತಿ ಸಮಾರೋಪ ಸಮಾರಂಭ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಉದ್ಘಾಟಿಸಿದರು. 
ಜಿಲ್ಲೆ

ಮಹಿಳೆಯರ ಪ್ರಗತಿಗೆ ನಿರಂತರ ಸಹಕಾರ

ಬಾಗಲಕೋಟೆ: ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಪ್ರಗತಿ ಹೊಂದಲು ನಮ್ಮ ಸಂಸ್ಥೆಯಿಂದ ನಿರಂತರ ಸಹಕಾರ ಇರುತ್ತದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಸೋಮವಾರ ಸಿರಿ ಸಾಂಸ್ಕೃತಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ವನಿತಾಲೋಕ ಆಶ್ರಯದಲ್ಲಿ ಒಂದು ತಿಂಗಳ ಕಾಲ ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿಧ ಕೌಶಲ ತರಬೇತಿ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ೬ ವರ್ಷಗಳಿಂದ ನಿರಂತರವಾಗಿ ಬ್ಯಾಂಕಿನಿಂದ ಮಕ್ಕಳು ಹಾಗೂ ಮಹಿಳೆಯರಿಗಾಗಿ ಉಚಿತ ತರಬೇತಿ ಶಿಬಿರಗಳನ್ನು ಜರುಗಿಸುವುದರ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ. ಇಂದು ಬಹಳಷ್ಟು ಮಹಿಳೆಯರು ವಿವಿಧ ಕೌಶಲ ತರಬೇತಿ ಪಡೆದು ತಮ್ಮ ಮನೆತನದ ನಿರ್ವಹಣೆಗಾಗಿ ಹೊಸ ಉದ್ಯೋಗಗಳನ್ನು ಪ್ರಾರಂಭಿಸಿ ಪ್ರತಿ ತಿಂಗಳು ೫೦, ೬೦ ಸಾವಿರ ರೂ. ಸಂಪಾದಿಸುತ್ತಿರುವದು ಸಂತೋಷ ತಂದಿದೆ ಎಂದರು.

ಮುಂಬರುವ ದಿನಗಳಲ್ಲಿ ಇನ್ನೂ ಹೊಸ ತರಬೇತಿಗಳನ್ನು ಆಯೋಜಿಸುವ ಮೂಲಕ ಮಹಿಳೆಯರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ. ಮಹಿಳೆಯರು ಕೌಶಲ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬಾಲ ಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ, ಮಹಿಳಾ ಪೊಲೀಸ್ ಠಾಣೆಯ ಮುಖ್ಯ ಪೇದೆ ವಿದ್ಯಾ ವಡಕೆ ಮಾತನಾಡಿದರು. ಬ್ಯಾಂಕಿನ ನಿರ್ದೇಶಕಿ ಜಯಮ್ಮ ಅಬ್ದುಲಪುರ, ತರಬೇತುದಾರರಾದ ರಾಜೇಶ್ವರಿ ಬೋನಗೇರಿ, ವಿಜಯಲಕ್ಷ್ಮೀ ದಿಡ್ಡಿಬಾಗಿಲು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಸಿ. ಕೇಮಾಳಿ, ಅಽಕಾರಿ ಮಹಾಬಳೇಶ್ವರ ಗುಡಗುಂಟಿ ಉಪಸ್ಥಿತರಿದ್ದರು. ಅರ್ಚನಾ ಗಡ್ಡಿಮಠ ಪ್ರಾರ್ಥಿಸಿದರು. ಉಷಾ ಜಿಗಜಿನ್ನಿ ಸ್ವಾಗತಿಸಿದರು. ಶಿಲ್ಪಾ ಯರಾಶಿ ವಂದಿಸಿದರು, ಶೃತಿ ಕಂಕಾಳೆ ನಿರೂಪಿಸಿದರು.