ಬಾಗಲಕೋಟೆ: ಮಹಿಳೆ ಬಾಲ್ಯದಿಂದ ತನ್ನ ಜೀವನದ ಬದುಕಿನವರೆಗೆ ಸೇವೆ ಮಾಡುವ ಗುಣ ಹೊಂದಿದ್ದಾಳೆ, ಮಾನವ ಕುಲದಲ್ಲಿ ಹೆಣ್ಣು ಮಕ್ಕಳು ಶ್ರೇಷ್ಠರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಲೋಕಾಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಮುಧೋಳ ತಾಲೂಕಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ-೨೦೨೫ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಇಡೀ ಕುಟುಂಬ ಶಿಕ್ಷಣವಂತಾಗುತ್ತದೆ, ಜ್ಯೋತಿಬಾಯಿ ಪುಲೆಯವರು ಸಾಕಷ್ಟು ಅವಮಾನ ಸಹಿಸಿಕೊಂಡು ಸಾಧನೆ ಮಾಡಿದರು. ಮನೋವಾದಿಗಳು ಹೆಣ್ಣು ಮಕ್ಕಳಿಗೆ ಬಹಳಷ್ಟು ಶೋಷಣೆ ಮಾಡಿದ್ದಾರೆ, ಕೆಲವು ವೈದಿಕ ಗ್ರಂಥಗಳಲ್ಲಿ ಹೆಣ್ಣು ಮಹಿಳೆ ಬಗ್ಗೆ ಕೀಳಾಗಿ ನೋಡಿದ್ದಾರೆ, ಇಂತಹ ಗ್ರಂಥಗಳನ್ನು ಸುಟ್ಟಾ ಹಾಕಬೇಕು, ಎಲ್ಲಾ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಧರ್ಮ ಬೇಕು, ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜ ಬೇಕು. ಅಂದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ. ದೇಶದಲ್ಲಿ ಮಾರ್ಯಾದೆ ಹತ್ಯೆಗಳು ನಡೆಯಬಾರದು ಎಂದರು.
ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಎಲೆ ಮರೆ ಕಾಯಿಯಂತಿರುವ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ ಕನ್ನಡ ಜಾನಪದ ಪರಿಷತ್ ಕಾರ್ಯ ಶ್ಲಾಘನೀಯವಾಗಿದೆ, ಹಬ್ಬದ ಮಹತ್ವವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸಿ ಕೊಡುವದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್.ಬಾಲಾಜಿ ಮಾತನಾಡಿ, ಲೋಕಾಪುರ ಪಟ್ಟಣವು ಜಾನಪದ ತವರೂರಾಗಿದ್ದು, ಕಲಾವಿದರಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮಾಶಾಸನವಿದೆ, ಕರ್ನಾಟಕ ಸರ್ಕಾರ ಕಲಾವಿದರಿಗೆ ೨೫೦೦ ಮಾಶಾಸನ ನೀಡಲು ಒತ್ತಾಯಿಸಿದರು.
ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಮಾತನಾಡಿ, ಜಾನಪದ ಸಂಸ್ಕೃತಿ ಭಾರತೀಯರ ಮೂಲ ಜೀವಾಳವಾಗಿದ್ದು, ಅದರಲ್ಲಿ ಕನ್ನಡ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತಿಕೆಯಿAದ ಕೂಡಿದೆ, ಜಾನಪದ ಹಾಡುಗಳು, ಸಾಕ್ಷರರಿಂದ ಬಂದವುಗಳಲ್ಲ, ಶಾಲೆಗೆ ಹೋಗದೆ, ಅಕ್ಷರ ಕಲಿಯದವರ ಒಡಲಾಳದಿಂದ ಬಂದ ಭಾವರೂಪದ ಹಾಡುಗಳಾಗಿವೆ ಎಂದರು.
ಸಮ್ಮೇಳನಾಧ್ಯಕ್ಷ ನಾಡೋಜ ಯಲ್ಲವ್ವ ರೊಡ್ಡಪ್ಪನವರ ಮಾತನಾಡಿ, ನನಗೆ ನಾಡೋಜ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಒಲಿದರು, ನಾನು ಒಬ್ಬಳು ದಲಿತ ಮಹಿಳೆ ಎನ್ನುವ ಕಾರಣಕ್ಕೆ ಸರಿಯಾದ ಗೌರವ ಸಿಗಲಿಲ್ಲಾ. ಆದರೆ ಕನ್ನಡ ಜಾನಪದ ಪರಿಷತ್‌ನವರು ನನಗೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನೀಡಿ ಗೌರವಿಸಿದ್ದು ಬಹಳಷ್ಟು ಸಂತಸ ತಂದಿದೆ. ಸಾಕಷ್ಟು ಕಲ್ಲು, ಮುಳ್ಳು ತುಳಿದು ನೋವು ಉಂಡು ಇಲ್ಲಿಯವರೆಗೆ ಸಾಧನೆ ಮಾಡಿದ್ದೇನೆ. ಈಗ ಸಮಾಜ ಗೌರವಿಸುತ್ತಿರುವುದಕ್ಕೆ ನನ್ನ ವೃತ್ತಿ ಬದುಕು ಸಂತೋಷ ತಂದಿದೆ ಎಂದರು.
ಈಶ್ವರಿ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಕ್ಕ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ರತ್ನಕ್ಕ ತಳೇವಾಡ, ಬಿ.ವ್ಹಿ. ಹಲಕಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಕೆಎಂಎಫ್ ಮಾಜಿ ನಿರ್ದೇಶಕ ಸಂಜಯ ತಳೇವಾಡ, ಕರ್ನಾಟಕ ಸಹಕಾರ ಕುರಿ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಗೋವಿಂದಪ್ಪ ಕೌಲಗಿ, ಭೀಮನಗೌಡ ಪಾಟೀಲ, ಮಹೇಶ ಪೂಜಾರ, ಉಪತಹಸೀಲ್ದಾರ ಬಿ.ಎಸ್.ರಂಗಣ್ಣವರ, ಸಪ್ತಸ್ವರ ಸಂಸ್ಥೆ ಅಧ್ಯಕ್ಷೆ ಜ್ಯೋತಿ ಪಾಟೀಲ, ಅನಿತಾ ಪಾಟೀಲ, ರೇಖಾ ನರಹಟ್ಟಿ, ರಾಜೇಶ್ವರಿ ವಿರಕ್ತಮಠ, ಡಾ. ನಿರ್ಮಲಾ ಮಲಘಾಣ ವಿವಿಧ ಕಲಾವಿದರು, ಕನ್ನಡ ಪ್ರೇಮಿಗಳು, ಸಾಹಿತಿಗಳು, ಸ್ಥಳೀಯರು ಇದ್ದರು.