ಮದ್ದೂರು: ಹಲವು ಸಮಾಜಮುಖಿ ಸೇವಾ ಚಟುವಟಿಕೆಗಳೊಂದಿಗೆ ಗ್ರಾಮೀಣ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.
ಪಟ್ಟಣದ ಶಿವಪುರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕ ಸಬಲೀಕರಣ ಮತ್ತು ಮಹಿಳೆಯರ ಉನ್ನತೀಕರಣಕ್ಕಾಗಿ ಸಂಸ್ಥೆಯು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೂ ಶ್ರಮಿಸುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ನಿರುದ್ಯೋಗ ಸಮಸ್ಯೆಯನ್ನೂ ದೂರಗೊಳಿಸಲಿ ಎಂದು ಅವರು ಆಶಿಸಿದರು.