ನಿಡಗುಂದಿಯ ಗ್ರಾಮೀಣ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಗ್ಯಾರಂಟಿ ಲಾನುಭವಿಗಳ ಸಮಾವೇಶವನ್ನು ಗಣ್ಯರು, ಲಾನುಭವಿಗಳು ಉದ್ಘಾಟಿಸಿದರು. ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಾಜಿ ಶಾಸಕ ರಾಜು ಆಲಗೂರ, ಎಸ್‌ಪಿ ಋಷಿಕೇಶ ಸೋನಾವಣೆ ಇತರರಿದ್ದರು. 
ಜಿಲ್ಲೆ

ಮಹಿಳೆಯರ ಆರ್ಥಿಕ ಶಕ್ತಿ ವೃದ್ಧಿಗೆ ಆದ್ಯತೆ

ನಿಡಗುಂದಿ: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಮೂಲಕ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದು ಜವಳಿ, ಕಬ್ಬು, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಗ್ರಾಮೀಣ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಿಡಗುಂದಿ, ಕೊಲ್ಹಾರ ತಾಲೂಕು ಹಾಗೂ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಗ್ಯಾರಂಟಿ ಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ವರ್ಗದ ಜನರ ಹಿತದೃಷ್ಟಿಯಿಂದ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಯೋಜನೆ ಪಡೆದುಕೊಂಡ ಲಾನುಭವಿಗಳಿಗೆ ಆರ್ಥಿಕ ಸದೃಡ ಹೆಜ್ಜೆ ಇಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಅತಿ ಹೆಚ್ಚು ಮಟ್ಟದಲ್ಲಿ ಮಹಿಳೆಯರು ಈ ಸಮಾವೇಶದಲ್ಲಿ ಸೇರಿದ್ದು, ಸಂತಸ ತಂದಿದೆ ಎಂದರು.

ತಾಲೂಕಿನಲ್ಲಿ 80 ಸಾವಿರ ಲಾನುಭವಿಗಳು ಗ್ಯಾರಂಟಿ ಯೋಜನೆ ಪಡೆಯಲು ಅರ್ಹರಾಗಿದ್ದಾರೆ. ಅದರಲ್ಲಿ 73 ಸಾವಿರ ಲಾನುಭವಿಗಳು ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಲಾಭ ಪಡೆದಿದ್ದಾರೆ. ಉಳಿದ 7 ಸಾವಿರ ಜನರಿಗೂ ಯೋಜನೆ ತಲುಪಿಸುವ ಕಾರ್ಯ ಮಾಡಲಿದೆ. ಕಾಂಗ್ರೆಸ್‌ನ ಇಂದಿರಾಗಾಂಧಿ ನೀಡಿದ ವೃದ್ಧರ ಮಾಸಾಶನ ನೆನೆಯುವ ಜನರು ಅದೇ ಕಾಂಗ್ರೆಸ್ ತಿಂಗಳಿಗೆ 2 ಸಾವಿರ ಆರ್ಥಿಕ ಸಹಾಯ ಮಾಡಿದ್ದು, ಎಂದಿಗೂ ಮರೆಯಲಾರರು ಎನ್ನುವ ವಿಶ್ವಾಸವಿದೆ ಎಂದರು.

5 ಕೆಜಿಯಿಂದ ತಲಾ ಹತ್ತು ಕೆಜಿ ಅಕ್ಕಿ ನೀಡಲು ಕೇಂದ್ರಕ್ಕೆ ಹೆಚ್ಚುವರಿ ಅಕ್ಕಿ ನೀಡುವಂತೆ ಪತ್ರ ಬರೆದು ಮನವಿ ಮಾಡಿದರೂ ಕೇಂದ್ರ ಅಕ್ಕಿ ನೀಡಲಿಲ್ಲ. ಆದರೆ, ನುಡಿದಂತೆ ಹೆಚ್ಚುವರಿ 5 ಕೆಜಿ ಅಕ್ಕಿ ಹಣವನ್ನು ತಮ್ಮ ಅಕೌಂಟ್‌ಗೆ ನೀಡಲಾಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಮಕ್ಕಳಿಗೆ ಹಾಲು, ಮೊಟ್ಟೆ, ಶೂ ಭಾಗ್ಯ ಹಾಗೂ ಕೃಷಿಭಾಗ್ಯ, ಶಾದಿಭಾಗ್ಯ ಸೇರಿದಂತೆ ಮುಂತಾದ ಕೊಡುಗೆ ನೀಡಿದ್ದಾರೆ. ಸದ್ಯ ನಿರುದ್ಯೋಗಿ ಯುವಕರಿಗೆ ಯುವನಿಧಿ ನೀಡಲಾಗುವುದು ಎಂದರು.

ಕೂಡಲಸಂಗಮ ಪ್ರಾಧಿಕಾರದಲ್ಲಿದ್ದ ಬಸವನಬಾಗೇವಾಡಿಗೆ ಪ್ರತ್ಯೆಕ ಪ್ರಾಧಿಕಾರ ರಚನೆ ಹಾಗೂ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಂತಸ ತಂದಿದೆ. ಗ್ಯಾರಂಟಿ ಯೋಜನೆ ನಿರಂತರವಾಗಿ ತಲುಪುವ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಗ್ಯಾರಂಟಿ ಯೋಜನೆ ಲಾಭ ಸಿಗದಿದ್ದವರನ್ನು ಗುರುತಿಸಿ ಅವರಿಗೂ ಯೋಜನೆ ಲಾಭ ದೊರಕಿಸಿಕೊಡುವಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

ಮಾಜಿ ಶಾಸಕ ರಾಜು ಆಲಗೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಪಂ ಸಿಇಒ ರಿಶಿ ಆನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಹೆಸ್ಕಾಂ ಅಧೀಕ್ಷಕ ಸಿದ್ಧಪ್ಪ ಇತರರಿದ್ದರು.