ಬಾಗಲಕೋಟೆಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉದ್ಘಾಟಿಸಿದರು. ರಾಜ್ಯ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ, ತೋವಿವಿ ಉಪಕುಲಪತಿ ಡಾ. ವಿಷ್ಣುವರ್ಧನ, ಡಾ.ಮೀನಾ ಚಂದಾವರಕರ, ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷ ಅಶೋಕ ಸಜ್ಜನ ಹಾಗೂ ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ವುಶು ಸಂಸ್ಥೆ ಅಧ್ಯಕ್ಷ ರಾಜು ನಾಯ್ಕರ, ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಕಾಶಿ ಇತರರು ಇದ್ದರು. 
ಜಿಲ್ಲೆ

ಮಹಿಳೆಯರ ಆತ್ಮ ರಕ್ಷಣೆಗೆ ವುಶು ಅಗತ್ಯ

ಬಾಗಲಕೋಟೆ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ವುಶು ಕ್ರೀಡೆಯಾಗುವ ಜತೆಗೆ ಮಹಿಳೆಯರ ಆತ್ಮರಕ್ಷಣೆಗೆ ತುಂಬಾ ಸಹಕಾರಿಯಾಗಿದೆ ಎಂದು ರಾಜ್ಯ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದ ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆದಿಂದ ಸೋಮವಾರ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವುಶು ಕೇವಲ ಒಂದು ಕ್ರೀಡೆಯಾಗಿಲ್ಲ. ಪುರುಷ ಹಾಗೂ ಮಹಿಳೆಯರಿಗೆ ಆತ್ಮರಕ್ಷಣೆಯ ಒಂದು ದೊಡ್ಡ ಕ್ರೀಡೆಯಾಗಿದೆ. ಆದರೆ, ಈ ಕ್ರೀಡೆಗೆ ಬೇಕಾದಷ್ಟು ಜನಪ್ರಿಯತೆ ಇನ್ನೂ ಸಿಕ್ಕಿಲ್ಲ. ದೇಶ ಹಾಗೂ ರಾಜ್ಯದಲ್ಲಿ ವುಶುಗೆ ಹೆಚ್ಚಿನ ಪ್ರಚಾರ ಸಿಗುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಇದರಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಜನರು ಗುರುತಿಸಲು ಸಾಧ್ಯವಾಗುತ್ತದೆ. ಜತೆಗೆ ಅನೇಕರಿಗೆ ಈ ಕ್ರೀಡೆಯ ಬಗ್ಗೆ ಜ್ಞಾನ ಬರುತ್ತದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ರೀಡಾಸಕ್ತಿಯಿಂದಲೇ ಖೇಲೋ ಇಂಡಿಯಾ ಸಂಸ್ಥೆ ಸ್ಥಾಪಿಸಲಾಗಿದೆ. ಖೇಲೋ ಇಂಡಿಯಾ ಸಂಸ್ಥೆಯ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ದೊರಕುತ್ತಿರುವುದರಿಂದಲೇ ದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾ ಪಟುಗಳು ಈ ಸಂಸ್ಥೆಯ ಮೂಲಕ ಪರಿಣಿತ ಹೊಂದಿದ ಕ್ರೀಡೆಯಲ್ಲಿ ತರಬೇತಿ ಪಡೆದು ರಾಜ್ಯ ಹೆಮ್ಮೆ ಪಡುವ ಸಾಧನೆ ಮಾಡಬೇಕು ಎಂದರು.

ವಿಜಯಪುರದ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿ, ಕ್ರೀಡಾಪಟುಗಳು ಒಂದು ಬದ್ಧತೆ ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ ಪಡುವುದು ಬಹು ಮುಖ್ಯ. ಅಂದಾಗ ಮಾತ್ರ ನಾವು ಅಂದುಕೊಂಡಿರುವ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಖೇಲೋ ಇಂಡಿಯಾ ಸಂಸ್ಥೆಯ ಮೂಲಕ ಕ್ರೀಡಾ ಪಟುಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಈ ಮೂಲಕ ಕೇಂದ್ರ ಸರಕಾರ ವಿದ್ಯಾರ್ಥಿಗಳ ಸಾಧನೆಗೆ ಯಾವುದೇ ಅನಾನುಕೂಲವಾಗದ ರೀತಿಯಲ್ಲಿ ಈ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡಲು ಬೇಕಿರುವ ತರಬೇತಿ ನೀಡುತ್ತಿದ್ದಾರೆ. ಕ್ರೀಡಾಪಟುಗಳು ಈ ಸಂಸ್ಥೆಯ ಲಾಭ ಪಡೆದು ನಿಮ್ಮ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ತೋವಿವಿ ಉಪಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿದರು. ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷ ಅಶೋಕ ಸಜ್ಜನ ಹಾಗೂ ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ವುಶು ಸಂಸ್ಥೆ ಅಧ್ಯಕ್ಷ ರಾಜು ನಾಯ್ಕರ, ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಕಾಶಿ, ರಾಜ್ಯ ವುಶು ಸಂಸ್ಥೆಯ ಖಜಾಂಚಿ ಸಂಗಮೇಶ ಲಾಯದಗುಂದಿ ಸೇರಿದಂತೆ ೧೦ ರಾಜ್ಯಗಳ ವುಶು ತರಬೇತುದಾರರು ಸೇರಿದಂತೆ ಅನೇಕರಿದ್ದರು.