ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಉಪ್ಪಿಗೇರನಹಳ್ಳಿಯಲ್ಲಿ ಮಹಿಳೆಯ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಪೊಲೀಸರನ್ನು ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮುದಾಯದ ಲತಮ್ಮ ಅವರನ್ನು ಹಾಡಹಗಲೇ ಭರ್ಬರವಾಗಿ ಹತ್ಯೆ ಮಾಡಲಾಗಿದೆ. ಗುರುವಾರ ಕೃತ್ಯ ನಡೆದಿದ್ದು, ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ನ.29 ರೊಳಗೆ ಬಂಧಿಸದಿದ್ದರೆ ಜಿಲ್ಲಾ ಪೊಲೀಸ್ ಕಚೇರಿ ಬಳಿ 30 ರಂದು ನಿರಶನ ನಡೆಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮರಣೋತ್ತರ ಪರೀಕ್ಷೆ, ಎಫ್‌ಎಸ್‌ಎಲ್ ವರದಿಗಳನ್ನು ಶೀಘ್ರ ತರಿಸಿಕೊಂಡು ತನಿಖೆ ತೀವ್ರಗೊಳಿಸಬೇಕು. ದುಷ್ಕೃತ್ಯ ಎಸಗಿದ ತಪ್ಪಿಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದರು.
ನಾನು ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದೇನೆ. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರನ್ನು ಭೇಟಿ ಮಾಡಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸುತ್ತೇನೆ. ಪ್ರಕರಣ ಭೇದಿಸಲು ಎಸ್‌ಐಟಿ ರಚಿಸಬೇಕು ಹಾಗೂ ತಪ್ಪಿಸ್ಥರನ್ನು ತ್ವರಿತವಾಗಿ ಬಂಧಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಈಡಿಗ ಸಮುದಾಯದ ಮುಖಂಡರಾದ ಜಿ.ತಿಪ್ಪೇಸ್ವಾಮಿ, ಎಸ್.ಮೋಹನ್‌ಕುಮಾರ್, ಪ್ರತಾಪ್, ಮೋಹನ್, ಮಹಾಂತೇಶ್ ಇದ್ದರು.