ಬೀದರ್: ಹೆಣ್ಣು ಮಕ್ಕಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಅವರ ಕನಸು ಸಾಕಾರಗೊಳಿಸಲು ಅವಕಾಶಗಳನ್ನು ನೀಡಬೇಕು. ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸುವ ವಾತಾವರಣ ನಿರ್ಮಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಹೇಳಿದರು.
ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚಾರಣೆ ಉದ್ಘಾಟಿಸಿ ಮಾತನಾಡಿ, ಲಿಂಗ ತಾರತಮ್ಯ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಹೆಣ್ಣು ಮಕ್ಕಳಿಗೆ ಗೌರವ ಸಿಗುವುದಿಲ್ಲ. ಹೆಣ್ಣಿಗೆ ಸಮಾನ ಅವಕಾಶ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಅವರನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಕೇವಲ ಹೆಣ್ಣು ಮಕ್ಕಳ ದಿನ ಆಚರಿಸಿದರೆ ಸಾಲದು. ದಿನ ನಿತ್ಯ ಮಹಿಳೆಯರಿಗೆ ಗೌರವ ನೀಡಿ ಅವರನ್ನು ರಕ್ಷಣೆ ಮಾಡುತ್ತಿರಬೇಕು ಎಂದರು.
ಸರ್ಕಾರಿ ಬಾಲಕರ ಬಾಲಮಂದಿರ ಅಧೀಕ್ಷಕ ಶ್ರೀನಿವಾಸ ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ ನಿರೂಪಣೆ ಮಾಡಿದರು. ಅಧೀಕ್ಷಕಿ ರೂಪಾ ಸ್ವಾಗತಿಸಿದರು. ಶಿಲ್ಪಾ ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ ಕಾರ್ಯಕ್ರಮ ನಡೆಯಿತು.