ಮೈಸೂರು: ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿರುವ ನಗರದ ಮಹಿಳಾ ಸರ್ಕಾರಿ ಉದ್ಯೋಗಿಯೊಬ್ಬರು 27.49 ಲಕ್ಷ ರೂ.ಹಣ ಕಳೆದುಕೊಂಡಿದ್ದಾರೆ.
ಬೃಂದಾವನ ಬಡಾವಣೆ ಮೊದಲ ಹಂತದ 59 ವರ್ಷದ ಮಹಿಳೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ತಮ್ಮ ಹಾಗೂ ತಮ್ಮ ಪತಿಯ ಖಾತೆಯಿಂದ ಹಣ ವರ್ಗಾವಣೆ ಮಾಡಿ ಹಣ ಕಳೆದುಕೊಂಡಿದ್ದಾರೆ.
ಅಪರಿಚಿತರೊಬ್ಬರು ಆ.27ರಂದು ಕರೆ ಮಾಡಿ ಮುಂಬೈ ಅಪರಾಧ ವಿಭಾಗದ ಪೊಲೀಸ್ ಎಂದು ಹೇಳಿಕೊಂಡರು. ನಂತರ ವ್ಯಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ, ಮುಂಬೈ ನರೇಶ್ ಗೋಯಲ್ ಅವರು ಮನಿ ಲ್ಯಾಂಡ್ರಿಂಗ್‌ನಲ್ಲಿ ಬಂಧಿಸಲಾಗಿದೆ.
ಅವರ ಬಳಿ ಹಲವು ಎಟಿಎಂ ಕಾರ್ಡ್ ಸಿಕ್ಕಿರುವುದಲ್ಲದೆ, ಅವರು ನಿಮಗೆ ಶೇ.20ರಷ್ಟು ಕಮಿಷನ್ ನೀಡಿದ್ದಾನೆ. ಆದ್ದರಿಂದ ನಿಮ್ಮ ಎಲ್ಲ ಖಾತೆಗಳನ್ನೂ ಪರಿಶೀಲಿಸಬೇಕು. ನಮ್ಮ ತನಿಖೆಗೆ ಸಹಕರಿಸದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ.
ಮುಂಬೈ ಪೊಲೀಸರೇ ಇರಬಹುದೆಂದು ನಂಬಿದ ಮಹಿಳೆ, ಮೊದಲು ತಮ್ಮ ಖಾತೆಯಿಂದ 99,999 ರೂ. ವಂಚಕರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ನಿಮ್ಮ ಬ್ಯಾಲೆನ್ಸ್ ಶೀಟ್‌ನ ಸ್ಕ್ರೀನ್‌ಶಾಟ್ ಕಳುಹಿಸಿ ಎಂದು ತಿಳಿಸಿದ್ದಾರೆ. ಅದನ್ನು ಕಳುಹಿಸಿದಾಗ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣದ ಆರ್‌ಟಿಜಿಎಸ್ ಟ್ರ್ಯಾಕ್ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ನಂಬಿದ ಮಹಿಳೆ, ಮತ್ತೆ 4.50 ಲಕ್ಷ ರೂ. ವರ್ಗಾಯಿಸಿದ್ದಾರೆ.
ಇಷ್ಟಕ್ಕೆ ಬಿಡದ ವಂಚಕರು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ ಎಂದು ಬೆದರಿಸಿ, ನಿಮ್ಮ ಪತಿಯ ಖಾತೆಯಲ್ಲಿರುವ ಹಣವನ್ನೂ ಪರಿಶೀಲಿಸಬೇಕೆಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಹೆದರಿದ ಮಹಿಳೆ, ತಮ್ಮ ಪತಿಯ ಖಾತೆಯಿಂದ 22 ಲಕ್ಷ ರೂ. ಹಣವನ್ನು ವಂಚಕರು ತಿಳಿಸಿದ ಖಾತೆಗೆ ವರ್ಗಾಯಿಸಿದ್ದಾರೆ.
ಕಡೆಗೆ ಪಿಎಫ್ ಹಣವನ್ನೂ ವರ್ಗಾವಣೆ ಮಾಡುವಂತೆ ಸೂಚಿಸಿದಾಗ ಅವರು ಪೊಲೀಸರಲ್ಲ, ವಂಚಕರೆಂಬುದು ಗೊತ್ತಾಗಿದೆ. ವಂಚಕರ ಬಲೆಗೆ ಸಿಲುಕಿ ಹಣ ಕಳೆದುಕೊಂಡಿದ್ದರ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.