ಹಾಸನ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2011ರಿಂದ 2023ರವರೆಗೆ ಕಳೆದ 13 ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳು ನಾಪತ್ತೆ ಸಂಬಂಧ ದಾಖಲಾದ 169 ಪ್ರಕರಣಗಳಲ್ಲಿ 51 ಪ್ರಕರಣವನ್ನು ಭೇದಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಅದೇ ರೀತಿ ಮಹಿಳೆಯರು ಮತ್ತು ಮಕ್ಕಳ ನಾಪತ್ತೆ ಪ್ರಕರಣ ಭೇದಿಸುವಂತೆ ಹಲವು ಸಂಘಟನೆಗಳು ಮನವಿ ಮಾಡಿದ್ದರಿಂದ ಡಿವೈಎಸ್ಪಿ ಮಂಜುನಾಥ್ ಮತ್ತು ಪಿಎಸ್‌ಐಗಳಾದ ಲತಾ, ಸಂತೋಷ್ ನೇತೃತ್ವದಲ್ಲಿ 19 ಜನ ಸಿಬ್ಬಂದಿಯ ಒಂದು ವಿಶೇಷ ತಂಡವನ್ನು ಮೇ 24ರಂದು ರಚನೆ ಮಾಡಲಾಯಿತು. ಈ ತಂಡ ಚುರುಕು ಕಾರ್ಯಾಚರಣೆ ಮಾಡುವ ಮೂಲಕ ಇಡೀ ಪೊಲೀಸ್ ಇಲಾಖೆಗೆ ಗೌರವ ತಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ತಂಡ ಕೇವಲ ಒಂದು ತಿಂಗಳಲ್ಲಿ 51 ಪ್ರಕರಣವನ್ನು ಭೇದಿಸಿ, ಇದರಲ್ಲಿ 33 ಮಹಿಳೆಯರು, 27 ಮಕ್ಕಳನ್ನು ಪತ್ತೆ ಹಚ್ಚಿದೆ. ನಾಪತ್ತೆಯಾಗಿದಂತಹ ಮಕ್ಕಳು ಮತ್ತು ಮಹಿಳೆಯರು ಹಾಗೂ ಯುವತಿಯರು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆಯೇ ಅಥವಾ ಅವರನ್ನು ಜೀತ ಪದ್ಧತಿಗೆ ಬಳಸಿಕೊಂಡಿದ್ದಾರೆಯೇ, ವೇಶ್ಯಾವಾಟಿಕೆ ಹಾಗೂ ಕಳ್ಳ ಸಾಗಾಣಿಕೆ ಮಾಡಲಾಗಿದೆ ಎಂಬ ಅನುಮಾನದಿಂದ ಪತ್ತೆ ಮಾಡಲು ನಾವು ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ಆರಂಭಿಸಿದೆವು. ಇದುವರೆಗೂ ಪತ್ತೆಯಾಗಿರುವ ಯಾವ ಪ್ರಕರಣಗಳು ಕೂಡ ಈ ರೀತಿ ಕಂಡು ಬಂದಿಲ್ಲ. ಎಲ್ಲರೂ ಕೂಡ ಸುರಕ್ಷಿತವಾಗಿದ್ದಾರೆ. ಯಾರನ್ನು ಕೂಡ ಅಪಹರಣ ಮಾಡಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
2011ರಿಂದ ಇಲ್ಲಿಯವರೆಗೆ ದಾಖಲಾಗಿದ್ದ ಪ್ರಕರಣಗಳನ್ನು ಕೈಗೆತ್ತಿಕೊಂಡ ಈ ತಂಡ ನಾಪತ್ತೆಯಾಗಿರುವ ಮಹಿಳೆಯರು ಮತ್ತು ಮಕ್ಕಳ ಮನೆಮನೆಗಳಿಗೆ ಭೇಟಿ ನೀಡಿ ತಳಹಂತದಿಂದಲೂ ಕೂಡ ಮಾಹಿತಿ ತಲೆ ಹಾಕಿದೆ. ನಾನಾ ಕಾರಣಗಳಿಂದ ಮಹಿಳೆಯರು ಮನೆ ಬಿಟ್ಟು ಹೋಗಿದ್ದರೆ, ಮಕ್ಕಳು ಕೂಡ ಬೇರೆ ಬೇರೆ ಊರು ಮತ್ತು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರ ಮಾಹಿತಿ ಕಲೆ ಹಾಕಿ ಪ್ರಕರಣವನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆದ ವಿಶೇಷ ಕಾರ್ಯಾಚರಣೆ ಇದಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದಂತಹ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ 20,000 ರೂ. ನಗದು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅರುಣ್ ಕುಮಾರ್, ಪಿಎಸ್‌ಐಗಳಾದ ಲತಾ, ಸಂತೋಷ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ನಾಪತ್ತೆಯಾಗಿದ್ದ ಮಗುವಿನ ಕೊಲೆ!
ಏಳೆಂಟು ವರ್ಷಗಳ ಹಿಂದೆ ಮಗು ನಾಪತ್ತೆ ಪ್ರಕರಣದ ಜಾಡು ಹಿಡಿದು ಹೊರಟ ತನಿಖಾ ತಂಡಕ್ಕೆ ಒಂದು ಅಚ್ಚರಿಯ ವಿಚಾರ ತಿಳಿದುಬಂದಿತು. ದುಷ್ಕರ್ಮಿಗಳು ಆ ಮಗುವನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಇದುವರೆಗೂ ಆ ಮಗು ನಾಪತ್ತೆಯಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಆರೋಪಿಗಳನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಬಹುತೇಕರು ಹೊರ ಜಿಲ್ಲೆಗಳಲ್ಲಿ ಪತ್ತೆ
ಮಹಿಳೆಯರು ಮತ್ತು ಮಕ್ಕಳು ನಾಪತ್ತೆ ಪ್ರಕರಣದಲ್ಲಿ ಬಹುತೇಕರು ಹೊರ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದಲ್ಲಿ ತೊಂದರೆ ಹಿನ್ನೆಲೆಯಲ್ಲಿ ಅವರು ಮನೆ ಬಿಟ್ಟು ಹೋಗಿ ಬೇರೆ ಕಡೆ ಜೀವನ ನಡೆಸುತ್ತಿದ್ದರೆ, ಇನ್ನು ಕೆಲವರು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಮಕ್ಕಳು ಅಂಗಡಿ, ಬೇಕರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ಪ್ರಕರಣದಲ್ಲಿ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಕೂಡ ಪತ್ತೆ ಮಾಡಲಾಗಿದೆ.
ಪ್ರೀತಿ ನಿರಾಕರಣೆ, ಬಡತನ, ಪೋಷಕರ ನಿರ್ಲಕ್ಷಕ್ಕೆ ಮನೆ ಬಿಟ್ಟವರು
ಕೆಲ ಯುವತಿಯರು ಪ್ರೀತಿ ಮಾಡಿ, ಮನೆಯವರು ಅವರ ಪ್ರೀತಿ ನಿರಾಕರಣೆ ಮಾಡಿದ್ದರಿಂದ ಮನೆ ಬಿಟ್ಟು ಹೋಗಿದ್ದಾರೆ. ಅವರೆಲ್ಲರೂ ಈಗ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಕುಟುಂಬದಲ್ಲಿ ಕಲಹ ಹಾಗೂ ಬಡತನ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ಮನೆ ಬಿಟ್ಟು ಹೋಗಿದ್ದಾರೆ. ಇನ್ನು ಮಕ್ಕಳು ಪೋಷಕರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಹಣಕಾಸಿನ ತೊಂದರೆಯಿಂದಾಗಿ ಮನೆ ಬಿಟ್ಟು ಹೋಗಿದ್ದರು. ಈಗ ಅವರನ್ನೆಲ್ಲ ಪತ್ತೆ ಮಾಡಲಾಗಿದೆ. ಕೆಲವರು ಆಂಧ್ರ, ತೆಲಂಗಾಣ ಮತ್ತು ಇನ್ನಿತರ ಕಡೆಗಳಲ್ಲಿ ಬೇಕರಿ ಹಾಗೂ ಇತರೆ ಕೆಲಸ ಮಾಡುತ್ತಿದ್ದಾರೆ. ಅವರು ನಾಪತ್ತೆಯಾದ ಸಂದರ್ಭದಲ್ಲಿ ಅವರಿಗೆ 15ರಿಂದ 16 ವರ್ಷಗಳಾಗಿತ್ತು. ಈಗ ಅವರೆಲ್ಲರೂ ವಯಸ್ಕರಾಗಿದ್ದಾರೆ ಎಂದು ಎಸ್‌ಪಿ ವಿವರಿಸಿದರು.
25 ಠಾಣೆಗಳಲ್ಲಿ 51 ಪ್ರಕರಣ ಇತ್ಯರ್ಥ
ಜಿಲ್ಲೆಯ ವಿವಿಧ 25 ಠಾಣೆಗಳಲ್ಲಿ ಸುಮಾರು ಐವತ್ತೊಂದು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇವರಲ್ಲಿ 33 ಮಹಿಳೆಯರು, 27 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಕೆಲವರನ್ನು ಕರೆತರಲಾಗಿದೆ. ಕೆಲವರು ಮದುವೆಯಾಗಿದ್ದಾರೆ. ಅವರನ್ನು ಬಲವಂತದಿಂದ ಕರೆತರುವ ಪ್ರಯತ್ನ ಮಾಡಿಲ್ಲ. ಇನ್ನು ಕೆಲ ಪ್ರಕರಣಗಳು ಗಂಭೀರವಾಗಿರುವುದರಿಂದ ಅಂಥವರಿಗೆ ಪುನರ್ವಸತಿ ಹಾಗೂ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಯನ್ನು ಕೂಡ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ಹೇಳಿದರು.