ವಿಜಯವಾಣಿ ಸುದ್ದಿಜಾಲ ಧಾರವಾಡ
ಭೂಮಿಗಿರುವ ತಾಳ್ಮೆ-ಸಹನಾಶೀಲ ಗುಣಗಳು ಮಹಿಳೆಯಲ್ಲಿರುವುದರಿಂದ ಅವಳನ್ನು ತಾಳ್ಮೆಯ ಖಣಿ ಎಂದು ಕರೆಯಲಾಗಿದೆ. ಅವಳ ದಿವ್ಯ ವ್ಯಕ್ತಿತ್ವದ ಮುಂದೆ ಎಂತಹವರಾದರೂ ತಲೆ ಬಾಗಲೇಬೇಕು ಎಂದು ಜೀವಿ ಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ನಿರ್ಮಲಾ ಶಶಿಧರ ಪಾಟೀಲ ದತ್ತಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜೀವನದಲ್ಲಿ ಮಹಿಳೆಗೆ ಬರುವ ಪಾತ್ರಗಳು ಕುರಿತು ಉಪನ್ಯಾಸ ನೀಡಿದರು.
ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಸ್ತ್ರೀಯರನ್ನು ಎಲ್ಲಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ಇರುತ್ತಾರೆ. ಅಂತಹ ಮಹಿಳೆ ಮಮತೆ-ಸಮತೆ, ತ್ಯಾಗ, ಕರುಣೆ ಹಾಗೂ ಅನುಕಂಪದ ಪ್ರತಿರೂಪವಾಗಿದ್ದಾಳೆ. ಮಹಿಳೆ ತನ್ನ ವೈಯಕ್ತಿಕ ಸುಖ ತ್ಯಾಗ ಮಾಡಿ ಗಂಡನಿಗೆ ಆದರ್ಶ ಗೃಹಿಣಿಯಾಗಿ, ಕುಟುಂಬದ ಉನ್ನತಿಗೆ ಶ್ರಮಿಸುವ ಜೀವಿ. ತಾಯಿ, ಸೊಸೆ, ಸತಿ, ಮಗಳಾಗಿ ತನ್ನ ವಿವಿಧ ಪಾತ್ರಗಳನ್ನು ಅಚ್ಚುಕಟ್ಟಾಗಿ ಫಲಾಪೇಕ್ಷೆ ಇಲ್ಲದೆ ನಿರ್ವಹಿಸುತ್ತಾಳೆ. ಅಂತಹ ಮಹಿಳೆ ವ್ಯಕ್ತಿ ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾ ಸಂಗಮ ಸಂಸ್ಥೆ ಅಧ್ಯಕ್ಷ ಪ್ರಭು ಹಂಚಿನಾಳ ಮಾತನಾಡಿ, ನಿರ್ಮಲಾ ಶಶಿಧರ ಪಾಟೀಲರು ಪ್ರತಿಭಾನ್ವಿತ ಕಲಾ ಸಾಧಕರಾಗಿದ್ದರು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿತ್ತು. ರಂಗಭೂಮಿ ಜೀವಂತ ಕಲೆಗೆ ಅವರ ಸೇವೆ ಅನನ್ಯ ಎಂದರು.
ದತ್ತಿದಾನಿ ಪರ ಚನ್ನಮ್ಮ ಪಾಟೀಲ, ಮಹಾಂತೇಶ ಪಾಟೀಲ, ಡಾ. ಜಿನದತ್ತ ಹಡಗಲಿ,ಎಂ.ಎಂ. ಚಿಕ್ಕಮಠ, ಮನೋಜ ಪಾಟೀಲ, ಬಸವರಾಜ ಮುರಗೋಡ, ಸುರೇಶ ಹಿರೇಮಠ, ಅಭಿಷೇಕ ದೇಸಾಯಿ, ಬಸವಂತಪ್ಪ ತೋಟದ, ಶಿ.ಮ. ರಾಚಯ್ಯನವರ, ಇತರರು ಇದ್ದರು.