ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ಪಾತ್ರ ಬಹುಮುಖ್ಯ ಎಂದು ಪುರಸಭೆ ಸದಸ್ಯ ಸಿ.ಎನ್.ಶಶಿಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ರಾಘವೇಂದ್ರ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಚನ್ನರಾಯಪಟ್ಟಣ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ಕುಟುಂಬವನ್ನು ಸಂರಕ್ಷಿಸುವ, ಸಮಾಜವನ್ನು ಕಟ್ಟುವ, ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿಯಾಗಿದ್ದಾಳೆ. ಒಂದು ಕುಟುಂಬದ ಪ್ರತಿಬಿಂಬ ಸಮಾಜವೆಂಬ ಕನ್ನಡಿಯಲ್ಲಿ ಸುಂದರವಾಗಿ ಗೋಚರವಾಗಬೇಕಾದರೆ ಆ ಕುಟುಂಬದ ಮಹಿಳೆಯರು ಸ್ಫೂರ್ತಿಯ ಖನಿಯಾಗಿರಬೇಕು. ತಾಳ್ಮೆಯ ನೆಲೆಯಾಗಬೇಕು. ಮನೆಯ ಸದಸ್ಯರ ಬದುಕಿನ ಪುಟಗಳನ್ನು ಬರೆಯುವ ಲೇಖನಿಯಾಗಬೇಕು ಎಂದು ಸಲಹೆ ನೀಡಿದರು.
ಮದ್ಯಪಾನ ಸೇರಿದಂತೆ ದುಶ್ಚಟಗಳನ್ನು ಬಿಡಿಸುವ ವಿನೂತನ ಕಾರ್ಯಕ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಮಹಿಳೆಯರನ್ನು ಸಂಘಟಿಸುವ ಮೂಲಕ ಅವರು ಶಿಸ್ತಿನ ಜೀವನ ನಡೆಸಲು ಸಂಸ್ಥೆ ಹಲವಾರು ಯೋಜನೆ ಹಮ್ಮಿಕೊಂಡಿದೆ. ಸಂಸ್ಥೆ ಆರಂಭದ ಬಳಿಕ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಮೋಹನ್ ಧಾರ್ಮಿಕ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯೆ ರೇಖಾಅನಿಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾ ಅಧಿಕಾರಿ ಸುನೀತಾ ನಾಯಕ್, ಮುಖಂಡರಾದ ಪ್ರಭಾಕರ್ ಶಣೈ, ರಾಘವೇಂದ್ರ ಪೂಜಾರಿ, ಈಶ್ವರ ಇತರರು ಇದ್ದರು.