ಬೆಳಗಾವಿ: ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದ್ದು, ಅವರನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸುವ ಕೆಲಸ ಆಗಬೇಕಿದೆ ಎಂದು ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೇಖಕಿ ಸುನಂದಾ ಎಮ್ಮಿ ಅವರ ‘ಎಂಟು ಕೃತಿಗಳ ಲೋಕಾರ್ಪಣೆ ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯದಲ್ಲಿ ಪ್ರಮುಖವಾಗಿ ಅನಕ್ಷರಸ್ಥ ಮಹಿಳೆಯರ ಮೌಖಿಕ ಸಾಹಿತ್ಯ ಎದ್ದು ಕಾಣುತ್ತದೆ. ಆ ನಿಟ್ಟಿನಲ್ಲಿ ಲೇಖನ, ಕತೆ, ಕವನ, ಚುಟುಕು ಸಾಹಿತ್ಯ ಹೀಗೆ ವಿವಿಧ ಪ್ರಕಾರದ ಗಟ್ಟಿ ಸಾಹಿತ್ಯದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿದ್ದಾರೆ ಎಂದರು.
ಕಿತ್ತೂರು ಸಂಸ್ಥಾನ ಅರಮನೆ-ಗುರುಮನೆ ಕೃತಿ ಪರಿಚಯಿಸುತ್ತ ಒಂದು ಸಂಸ್ಥಾನದ ಕುರಿತು ಬರೆಯುವುದಕ್ಕೆ ಸಂಶೋಧನಾತ್ಮಕ ಮನೋಭಾವವಿರಬೇಕು. ಆ ನಿಟ್ಟಿನಲ್ಲಿ ಯಾರೂ ಗಮನಿಸದ ಕಿತ್ತೂರು ನಾಡಿನ ಅನೇಕ ವಿಚಾರಗಳನ್ನು ದಾಖಲಿಸಿರುವುದು ಗಮನಾರ್ಹ ಸಂಗತಿ. ಒಬ್ಬ ಗೃಹಿಣಿಯಾಗಿ ವಿವಿಧ ಪ್ರಕಾರದ 28 ಕೃತಿ ರಚಿಸುವುದು ಸುಲಭ ಸಾಧ್ಯವಲ್ಲ. ಹೀಗಾಗಿ ಸುನಂದಾ ಅವರ ಸಾಹಿತ್ಯಾಸಾಕ್ತಿ ಹಾಗೂ ಸಾಹಿತ್ಯ ಸೃಷ್ಟಿ ಅಪ್ರತಿಮ ಸಾಧನೆಯಾಗಿದೆ ಎಂದರು.
ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಕಿತ್ತೂರು ಕರ್ನಾಟಕ ಭಾಗದ ಇತಿಹಾಸದಲ್ಲಿ ಚನ್ನಮ್ಮ, ಮಲ್ಲಮ್ಮನವರ ಹೆಸರಿದ್ದಂತೆ ಸಾಹಿತ್ಯ ಲೋಕದಲ್ಲೂ ಈ ಭಾಗದ ಮಹಿಳೆಯರು ಹೆಸರು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಲಿಂಗರಾಜ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ರೇಣುಕಾ ಕಠಾರಿ, ಡಾ. ಪಿ.ಜಿ.ಕೆಂಪಣ್ಣವರ, ಪ್ರೊ. ಶ್ರೀಶೈಲ ಮಠಪತಿ, ಶೈಲಜಾ ಬಿಂಗೆ, ರತ್ನಾಪ್ರಭಾ ಬೆಲ್ಲದ, ಡಾ. ಜಿನದತ್ತ ದೇಸಾಯಿ, ಎಂ.ಎಸ್.ಇಂಚಲ, ಡಾ. ರಾಮಕೃಷ್ಣ ಮರಾಠೆ, ಡಾ. ಬಸವರಾಜ ಜಗಜಂಪಿ, ಯ.ರು. ಪಾಟೀಲ, ನೀಲಗಂಗಾ ಚರಂತಿಮಠ, ಹಮಿದಾ ದೇಸಾಯಿ, ಎ.ಎ. ಸನದಿ, ಸ.ರಾ. ಸುಳಕುಡೆ, ಜ್ಯೋತಿ ಬಾದಾಮಿ, ಡಾ. ಮೈತ್ರೆಯನಿ ಗದಿಗೆಪ್ಪಗೌಡರ ಇತರರಿದ್ದರು.