ಬೆಳಗಾವಿ: ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ದೀಪಾವಳಿ ಅಂಗವಾಗಿ ಜೆಎನ್ ವೈದ್ಯಕೀಯ ಮಹಾ ವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಈಚೆಗೆ ‘ದೀಪೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು.
ಮಹಿಳೆಯರಿಗಾಗಿ ರಂಗೋಲಿ, ಪೆಂಟಿಂಗ್, ಅಡುಗೆ, ರಾಖಿ, ನ್ಯಾಪಕಿನ್ ತಯಾರಿಕೆ, ತರಕಾರಿ ಹಾಗೂ ಹಣ್ಣುಗಳನ್ನು ವಿವಿಧ ಶೈಲಿಯಲ್ಲಿ ಕತ್ತರಿಸುವಿಕೆ, ಗುಂಪು ಹಾಡುಗಾರಿಕೆ, ಕುಣಿತ, ಚಿತ್ರಕಲೆ ಬಿಡಿಸುವುದು ಸೇರಿ ಅನೇಕ ಸ್ಫರ್ಧೆಗಳು ನಡೆದವು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷೆ ಆಶಾತಾಯಿ ಕೋರೆ ಅವರು, ಮಹಿಳಾ ಸಬಲೀಕರಣಕ್ಕೆ ನಮ್ಮ ಘಟಕ ಅಗತ್ಯ ಸಹಕಾರ ನೀಡುತ್ತಿದೆ. ಸಮಾಜದಲ್ಲಿ ಮಹಿಳೆ ತಾನು ರಕ್ಷಿಸಿಕೊಳ್ಳುವ ಕಲೆ ಕರಗತ ಸೇರಿ ಅನೇಕ ಕೌಶಲಗಳನ್ನು ಕಲಿಸಿಕೊಡಲಾಗುತ್ತಿದೆ. ಉದ್ಯೋಗಾಧಾರಿತ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವಲ್ಲಿ ಮಹಿಳಾ ಘಟಕ ಕಾರ್ಯ ನಿರತವಾಗಿದೆ ಎಂದರು.
ಉಪಾಧ್ಯಕ್ಷೆ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಮುಖ್ಯ ಸಂಯೋಜಕಿ ಡಾ. ಪ್ರೀತಿ ಕೋರೆ ದೊಡವಾಡ, ಕಾರ್ಯದರ್ಶಿ ಡಾ.ನೇಹಾ ಧಡೇದ ಇತರರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಮಹಿಳೆಯರನ್ನು ಆಶಾತಾಯಿ ಕೋರೆ ಅವರು ಅಭಿನಂಧಿಸಿದರು.