ಕಲಬುರಗಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಲಾ ಸಬಲೀಕರಣ ಮತ್ತು ಯುವ ಸಬಲೀಕಣದಲ್ಲಿ ರಾಜ್ಯ ದಾಪುಗಾಲು ಇಡುತ್ತಿದೆ. ಯುವ ನಿಧಿ ಯೋಜನೆ ಪರಿಣಾಮ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಶೇ.4.80 ರಿಂದ ಶೇ.2.25ಕ್ಕೆ ಕ್ಷೀಣಿಸಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ಬುಧವಾರ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಯುವ ನಿಧಿ ಫಲಾನುಭವಿಗಳ ಸಂವಾದದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡ ಜನರ ಕಲ್ಯಾಣಕ್ಕೆ ಪ್ರತಿ ವರ್ಷ ಸುಮಾರು 52 ಸಾವಿರ ಕೋಟಿ ರೂ. ಖರ್ಚು ಮಾಡುವಂತಹ ಇಂತಹ ಯೋಜನೆಗಳು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಇವು ಜನರ ಬದುಕು ಭದ್ರವಾಗಿಸಲು ಕಾರಣವಾಗಿವೆ ಎಂದು ಅಂತರಾಷ್ಟ್ರೀಯ ಪ್ರತಿಷ್ಟಿತ ಸಂಸ್ಥೆಗಳು ತಮ್ಮ ಅಧ್ಯಯನದಲ್ಲಿ ತಿಳಿಸಿವೆ ಎಂದರು.
ಶಕ್ತಿ ಯೋಜನೆಯಿಂದ ಮಹಿಳೆಯರ ವೃತ್ತಿ ಬದುಕಿಗೆ ಆಸರೆಯಾಗಿದಲ್ಲದೆ ಸ್ಚಾಲಂಬಿ ಬದುಕಿಗೆ ಕಾರಣವಾಗಿದೆ. ಶಕ್ತಿ ಮತ್ತು ಗೃಹ ಲಕ್ಣ್ಮೀ ಯೋಜನೆ ಪರಿಣಾಮ ರಾಜ್ಯದಲ್ಲಿ ಮಹಿಳೆಯರ ಉದ್ಯಮಶೀಲತೆ ಪ್ರಮಾಣ ಶೇ.12ಕ್ಕೆ ಏರಿದೆ. ಅನ್ನ ಭಾಗ್ಯ ಯೋಜನೆಯಿಮದ ಹಸಿವು ಮುಕ್ತಗೊಲಿಸಿದೆ. ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬೇರೆ ಬೇರೆ ಯೋಜನೆಗಳಲ್ಲಿ ಭ್ರಷ್ಟಾಚಾರದ ವಾಸನೆ ಕಾಣುತ್ತೇವೆ, ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಒಂದೂ ರೂ. ಭ್ರಷ್ಠಾಚಾರವಿಲ್ಲದೆ ಪಾರದರ್ಶಕವಾಗಿ ಜಾರಿಗೆ ತಂದಿರುವ ಶ್ರೇಯಸ್ಸು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಯುವ ನಿಧಿ ಯೋಜನೆಯಡಿ ತಾಂತ್ರಿಕ ಸಮಸ್ಯೆಯಿಂದ ಹಣ ಬರುತ್ತಿಲ್ಲವಾದರೆ ಟೋಲ್ ಫ್ರೀ ಸಂ.1800-5997154ಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಎಸ್.ಮೆಹರೋಜ್ ಖಾನ್ ಅವರು, ಯುವ ಸಮುದಾಯ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಇನ್ನು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗಿನ ಇತರೆ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ವಿಚಾರ ವಿನಿಮಯದಲ್ಲಿ ಭಾಗಿಯಾಗಬೇಕು. ಕಠಿಣ ಪರಿಶ್ರಮ ಇದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ. ಗುಲವರ್ಗಟ ವಿ.ವಿ. ಉತ್ತಮ ಕ್ಯಾಂಪಸ್ ಹೊಂದಿದೆ. ಗ್ರಂಥಾಲಯ ವನ್ನು ಸದುಪಯೋಗ ಪಡಿಡಿಸಿಕೊಳ್ಳಬೇಕು. ಯುವ ನಿಧಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಫಲಾನುಭವಿಗಳು ಏನಂದ್ರು:
ಕಳೆದ 11 ತಿಂಗಳಿನಿಂದ ಯುವನಿಧಿ ಯೋಜನೆಯಡಿ ಹಣ ಬರುತ್ತಿದೆ. ಪುಸ್ತಕ ಖರೀದಿ, ಉದ್ಯೋಗ ಪಡೆಯಲು ತರಬೇತಿಗೆ ಅನುಕೂಲವಾಗಿದೆ
-ಶಿವಲಿಂಗಯ್ಯ
ನಿರುದ್ಯೋಗ ಮುಕ್ತ ಕರ್ನಾಟಕ್ಕಾಗಿ ಯುವ ನಿಧಿ ಸಹಾಯವಾಗಿದೆ. ತಂದೆ ಒಕ್ಕಲುತನ ಮಾಡುತ್ತಿದ್ದು, ಅರ್ಥಿಕವಾಗಿ ನಾವು ಸಬಲರಲ್ಲ. ಯುವ ನಿಧಿ ಹಣದಿಂದ ಸಹೋದರನೊಂದಿಗೆ ಸೇರಿ ಧಾರವಾಡದಲ್ಲಿ ಉದ್ಯೋಗದ ತರಬೇತಿ ಪಡೆಯುತ್ತಿರುವೆ. ಗೃಹ ಲಕ್ಣ್ಮಿ ಹಣ ಬರುತ್ತೆ. ಗೃಹ ಜ್ಯೋತಿ ಮನೆ ಬೆಳಗಿಸಿದೆ
*-ವಿಜಯಲಕ್ಷ್ಮಿ,ಸ್ನಾತಕೋತ್ತರ ಪದವೀಧರೆ *
ಎಂ.ಎ. ಇಂಗ್ಲೀಷ್ ಅಭ್ಯಾಸ ಮಾಡುತ್ತಿದ್ದು, ಪ್ರತಿ ತಿಂಗಳು ದೃಡೀಕರಣ ನೀಡಿದ್ದರು ಕಳೆದ 3 ತಿಂಗಳಿನಿಂದ ಯುವ ನಿಧಿ ಹಣ ಬರುತ್ತಿಲ್ಲ
-ಯಲ್ಲಲಿಂಗ್
ಶಕ್ತಿ ಯೋಜನೆಯಡಿ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಅವಕಾಶ ಕಲ್ಪಿಸಬೇಕು
-ನಬಿ
ಶಕ್ತಿ ಯೋಜನೆ ಮಹಿಳೆಯರ ಊರು ನೋಡಲು ಕಾರಣವಾಗಿದೆ. ದೇಶ ಸುತ್ತಿ ನೋಡಿ, ಕೋಶ ಓದಿ ನೋಡಿ ಎನ್ನುವಂತೆ ಈ ಯೋಜನೆ ಆಸರೆಯಾಗಿದೆ. ಉಚಿತ ಪ್ರಯಾಣದಿಂದ ಹೆತ್ತವರು ಮಹಿಳೆಯರ ಉನ್ನತ ಶಿಕ್ಷಣಕ್ಕೆ ನೀರೆರೆಯುತ್ತಿದೆ.
ಪೂಜಾ,ಕೆಮಿಸ್ಟ್ರಿ ವಿದ್ಯಾರ್ಥಿನಿ
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷರಾದ ಸೋಮಶೇಖರ ಹಿರೇಮಠ, ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಭಾರತಿ, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರೆ, ಸೇರಿದಂತೆ ಇತರರು ಇದ್ದರು. ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್ ಅವರು ಸರ್ವರನ್ನು ಸ್ವಾಗತಿಸಿದರು. ಯುವ ನಿಧಿ ಸಂಯೋಜಕ ಡಾ.ಪ್ರಕಾಶ ಕರೇಜನ್ ವಂದಿಸಿದರು.