ತುಮಕೂರು: ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ಕೊನೆಗೂ ಸ್ವಂತ ನೆಲೆ ಸಿಕ್ಕಿದ್ದು, ಪದವಿ ಕಾಲೇಜಿಗೆ ಜಾಗ ನೀಡುವ ಸಂಬಂಧ ಉನ್ನತ ಶಿಕ್ಷಣ ಹಾಗೂ ಪ್ರೌಢಶಿಕ್ಷಣ ಇಲಾಖೆ ನಡುವಿನ ಹಗ್ಗಜಗ್ಗಾಟ ಕೊನೆಗೊಂಡಿದೆ.
ಬಿ.ಎಚ್.ರಸ್ತೆಯಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಒಡೆತನದಲ್ಲಿದ್ದ ಜಾಗದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ವಂತ ಕಟ್ಟಡ ನಿರ್ಮಾಣಕ್ಕೆ 1.03 ಎಕರೆ ಜಾಗವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. 2014-15ರಲ್ಲಿ ಆರಂಭವಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವೇ ಇರಲಿಲ್ಲ. ಪಿಯು ಕಾಲೇಜಿನ ಹಳೆಯ ಕಟ್ಟಡದಲ್ಲಿ 1450ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಅಪಾಯದಲ್ಲೇ ಪಾಠ ಕೇಳುತ್ತಿದ್ದು, ಸ್ವಂತ, ಕಟ್ಟಡಕ್ಕಾಗಿ ಹೋರಾಟ ನಡೆಸಲಾಗುತ್ತಿತ್ತು.
ಮಹಿಳಾ ಪದವಿ ಕಾಲೇಜಿಗೆ ಸೇರಲು ಗ್ರಾಮೀಣ ವಿದ್ಯಾರ್ಥಿನಿಯರು ಮುಗಿಬಿದ್ದ ಹಿನ್ನೆಲೆಯಲ್ಲಿ ದಾಖಲಾತಿ ನಿರಾಕರಿಸದೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಯಿತು. 3 ವರ್ಷದಲ್ಲೇ ವಿದ್ಯಾರ್ಥಿನಿಯರ ಸಂಖ್ಯೆ ಸಾವಿರ ದಾಟಿತು. ಬೆರಳೆಣಿಕೆ ಕೊಠಡಿಗಳ ಸಂಖ್ಯೆ ಸಾಕಾಗಲಿಲ್ಲ. ಆ ಕಾರಣಕ್ಕೆ ಪಿಯು ಕಾಲೇಜಿನ ಪ್ರತ್ಯೇಕ ಕಟ್ಟಡದಲ್ಲಿ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲಾಯಿತು. ಇಷ್ಟಾದರೂ ಯಾವೊಬ್ಬ ಜನಪ್ರತಿನಿಧಿಗಳು ಹೆಣ್ಣುಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಲಿಲ್ಲ.
ಕಳೆದ ವರ್ಷ ಹೋರಾಟ ತೀವ್ರ: ಕಳೆದ ಸೆಪ್ಟೆಂಬರ್‌ನಲ್ಲಿ ಜೋರು ಮಳೆಯಿಂದಾಗಿ ಬೃಹತ್ ಮರ ಕೊಠಡಿ ಮೇಲೆ ಬಿದ್ದು ವಿದ್ಯಾರ್ಥಿನಿ ಗಾಯಗೊಂಡು ನೂರಾರು ಮಕ್ಕಳು ಅಪಾಯದಿಂದ ಪಾರಾದಾಗ ಹೋರಾಟ ತೀವ್ರಗೊಂಡಿತು. ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಸ್ವಂತ ಕಟ್ಟಡಕ್ಕೆ ಆಗ್ರಹಿಸಿ ಪ್ರತಿಭಟನೆಗಿಳಿದರು. ಆಗ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿದ್ಯಾರ್ಥಿನಿಯರ ಮನವೊಲಿಸಿ ಸ್ವಂತ ನಿವೇಶನ ಒದಗಿಸುವ ಭರವಸೆಯಿತ್ತರು.
ಶಿಕ್ಷಣ ಸಚಿವರ ಭೇಟಿ: ವಿದ್ಯಾರ್ಥಿನಿಯರ ಪ್ರತಿಭಟನೆ ಬಳಿಕ ಶಾಸಕರು, ಸಂಸದರ ಮನವಿ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಕಾಲೇಜಿಗೆ ಆಹ್ವಾನಿಸಿ ಇಲ್ಲಿನ ದುಸ್ಥಿತಿ ಬಿಚ್ಚಿಡಲಾಗಿತ್ತು. ಅಲ್ಲದೆ, ಪ್ರಸ್ತುತ ಕಾಲೇಜು ನಡೆಯುತ್ತಿರುವ ಕಟ್ಟಡ ಸೇರಿ 2.20 ಎಕರೆ ವಿಸ್ತೀರ್ಣದ ಜಾಗವನ್ನು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ನೀಡುವಂತೆ ಜ್ಯೋತಿಗಣೇಶ್ ಒತ್ತಾಯಿಸಿದ್ದರು. ಅಲ್ಲದೆ, ಪದವಿಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಕೂಡ ಬರೆದಿದ್ದರು.
ಪಿಯು ಕಾಲೇಜು ಒಡೆತನದಲ್ಲಿ 34 ಎಕರೆ: ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಸೇರಿ ಒಟ್ಟಾರೆ 34 ಎಕರೆ ಜಾಗವು ಪಿಯು ಕಾಲೇಜಿನ ಪ್ರಾಂಶುಪಾಲರ ಹೆಸರಲ್ಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಎಕರೆ, ಪದವಿ ಮಹಿಳಾ ಹಾಸ್ಟೆಲ್ ಕಟ್ಟಡ, ಬಿಸಿಎಂ ಹಾಸ್ಟೆಲ್ ಕಟ್ಟಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಯು ಕಾಲೇಜಿನ ವಿದ್ಯಾರ್ಥಿನಿಲಯ, ಡಿಡಿಪಿಐ ಕಚೇರಿ, ಶಿಕ್ಷಕರ ಸದನಕ್ಕೆ ಜಾಗವನ್ನು ತುಂಡುತುಂಡಾಗಿ ಹಂಚಲಾಗಿದೆ.
ಹಾಲಿ ಕಾಲೇಜು ನಡೆಯುತ್ತಿರುವ 2.20 ಎಕರೆ ವಿಸ್ತೀರ್ಣದ ನಿವೇಶನವನ್ನು ಮಹಿಳಾ ಕಾಲೇಜಿನ ಹೆಸರಿಗೆ ವರ್ಗಾಯಿಸಲು ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಲು ಸಿಎಂ, ಶಿಕ್ಷಣ ಸಚಿವರು ಸೇರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಈಗ 1.03 ಎಕರೆ ಜಾಗವನ್ನು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸ್ವಂತ ಕಟ್ಟಡ ನಿರ್ಮಿಸಿ ಉಪಯೋಗಿಸಲು ಅನುಮತಿ ನೀಡಿ ಆದೇಶಿಸಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ