ಸೇಡಂ: ಎಲ್ಲೆಡೆ ಹಸಿರು ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಸ್ಯ ಶ್ಯಾಮಲ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಸಸಿ ನೆಟ್ಟು, ಪೋಷಣೆ ಮಾಡಲು ಶ್ರಮಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಕರೆ ನೀಡಿದರು.
ಸರ್ಕಾರಿ ಕನ್ಯಾ ಪ್ರೌಢಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಸ್ಯ ಶ್ಯಾಮಲ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಮನೆ ಮುಂದೆ ಮರ-ಗಿಡ ಬೆಳೆಸಬೇಕು. ಸರ್ಕಾರ 50 ಲಕ್ಷ ಸಸಿಗಳನ್ನು ವಿತರಣೆ ಮಾಡುವ ಸಂಕಲ್ಪ ಹೊಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ತಾಲೂಕಿನ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಹಿಳಾ ಪದವಿಪೂರ್ವ ಕಾಲೇಜು ಆರಂಭಿಸುವ ಚಿಂತನೆ ಇದ್ದು, ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ ಸೌಕರ್ಯ ಕೊರತೆ ನನ್ನ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಾಪಂ ಇಒ ಚನ್ನಪ್ಪ ರಾಯಣ್ಣನವರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿರಾಜು, ಕ್ಷೇತ್ರ ಸಮನ್ವಯಾಧಿಕಾರಿ ಶಂಕರಲಿAಗಪ್ಪ, ಸಾಮಾಜಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ಲಕ್ಷö್ಮಣ, ಪುರಸಭೆ ಸದಸ್ಯೆ ಫಾತಿಮಾ ಅಂಜುಮ್, ಎಸ್‌ಡಿಎಂಸಿ ಅಧ್ಯಕ್ಷ ದಶರಥ ಚವ್ಹಾಣ್, ಮುಖ್ಯಗುರು ಚಂದ್ರಕಾAತ ಕೆಂಚೆ, ಪುರಸಭೆಯ ಗುಂಡಪ್ಪ, ಅಶೋಕರೆಡ್ಡಿ ಚಿಲುಮೆ, ಸಕ್ರೆಪ್ಪ ಇದ್ದರು.
ವಿದ್ಯಾರ್ಥಿನಿ ಜಯಶ್ರೀ ಪ್ರಾರ್ಥಿಸಿದರು. ಶಿಕ್ಷಕ ರಾಜು ಸ್ವಾಗತಿಸಿದರು. ಚಂದ್ರಶೇಖರ ಪವಾರ್ ನಿರೂಪಣೆ ಮಾಡಿ, ವಂದಿಸಿದರು.