ಚಂದ್ರಶೇಖರ ಎಮ್ಮೆ ಭಾಲ್ಕಿ
ಮಹಿಳಾ ಸದಸ್ಯರನ್ನೇ ಒಳಗೊಂಡ ಖ್ಯಾತಿ ಹೊಂದಿದ್ದ್ದ ಭಾಲ್ಕಿ ತಾಲೂಕಿನ ತೂಗಾಂವ್(ಎಚ್) ಗ್ರಾಮ ಪಂಚಾಯಿತಿಯಲ್ಲಿ ಇದೀಗ ಜಿದ್ದಿನ ಕುಸ್ತಿ ಬಿದ್ದಿದೆ. 2015ರ ಚುನಾವಣೆಯಲ್ಲಿ ಗ್ರಾಪಂನ ಎಲ್ಲ 16 ಸ್ಥಾನಗಳಲ್ಲಿ ಮಹಿಳೆಯರೇ ಗೆದ್ದಿದ್ದರು. ಆ ಮೂಲಕ ಮಹಿಳಾ ಪ್ರತಿನಿಧಿಗಳುಳ್ಳ ರಾಜ್ಯದ ಏಕೈಕ ಗ್ರಾಪಂ ಎಂಬ ಹೆಗ್ಗಳಿಕೆ ಪಡೆದು, ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ ಐದು ವರ್ಷದ ಇಲ್ಲಿನ ಮಹಿಳಾ ದರ್ಬಾರ್ ನಿರೀಕ್ಷಿತ ಬದಲಾವಣೆಗಳು ತರಲಿಲ್ಲ. ಮೊದ ಮೊದಲು ಭಾರಿ ಸುದ್ದಿ ಮಾಡಿದ್ದ ಮಹಿಳಾ ಆಡಳಿತ ಸದ್ದಿಲ್ಲದೆ ಕೊನೆಗೊಂಡಿದೆ.
ತೂಗಾಂವ್ ಗ್ರಾಪಂ ವ್ಯಾಪ್ತಿಗೆ ತೂಗಾಂವ್ ಮತ್ತು ಶ್ರೀಮಾಳಿ ಗ್ರಾಮ ಬರುತ್ತವೆ. ತೂಗಾಂವ್ ನಲ್ಲಿ 12 ಹಾಗೂ ಶ್ರೀಮಾಳಿಯಲ್ಲಿ 4 ಸ್ಥಾನಗಳಿವೆ. 2015ರ ಜೂನ್ ನಲ್ಲಿ ಜರುಗಿದ್ದ ಗ್ರಾಪಂ ಚುನಾವಣೆಯಲ್ಲಿ ಈ ಎಲ್ಲ ಸ್ಥಾನಗಳಲ್ಲಿ ಮಹಿಳೆಯರೇ ಗೆದ್ದಿದ್ದರು. 12 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. 4 ಸ್ಥಾನಕ್ಕೆ ಚುನಾವಣೆ ನಡೆದರೂ ಮಹಿಳೆಯರನ್ನೇ ಗೆಲ್ಲಿಸಲಾಗಿತ್ತು. ಇಡೀ ರಾಜ್ಯದಲ್ಲೇ ಎಲ್ಲ ಸದಸ್ಯರು ಮಹಿಳೆಯರನ್ನು ಹೊಂದಿದ ಏಕೈಕ ಗ್ರಾಪಂ ಖ್ಯಾತಿಗೆ ಇದು ಭಾಜನವಾಗಿತ್ತು. ಮಹಿಳಾ ಪಂಚಾಯಿತಿಗೆ ವಿಶೇಷ ಅನುದಾನ ಬರುವುದು ಸೇರಿದಂತೆ ಅನೇಕ ನಿರೀಕ್ಷೆ ಗರಿಗೆದರಿದ್ದವು. ಆದರೆ ಅಂದುಕೊಂಡಂತೆ ಏನೂ ಆಗಿಲ್ಲ. ಮಹಿಳಾ ಮಣಿಗಳು ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಗ್ರಾಪಂ ಮಾದರಿ ಮಾಡುವ ಅವರ ಕನಸು ನನಸಾಗಲಿಲ್ಲ.
ಗ್ರಾಮದವರಾದ ಪುಣೆಯ ಹಿರಿಯ ಉದ್ಯಮಿ ಸುಭಾಷ ನೇಳಗೆ ಅವರ ಪ್ರಯತ್ನ ಫಲವಾಗಿ ಕಳೆದ ಸಲ ಹೆಚ್ಚಿನ ಅವಿರೋಧ ಸೇರಿ ಮಹಿಳೆಯರನ್ನೇ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಸಲ ಅಂಥ ಪ್ರಯತ್ನ ನಡೆದಿಲ್ಲ. ಕಳೆದ ಬಾರಿ ಗ್ರಾಮದ ಬಗ್ಗೆ ಆಸಕ್ತಿ ವಹಿಸಿದ್ದ ನೇಳಗೆ ಅವರು ಇಲ್ಲಿನ ವಿವಿಧ ಬೆಳವಣಿಗೆಗಳ ಬಗ್ಗೆ ಬೇಸರಗೊಂಡು ಈ ಬಾರಿ ಇತ್ತ ಹಣಕಿ ಸಹ ಹಾಕಿಲ್ಲ. ಹೀಗಾಗಿ ಸದ್ಯ ಎಲ್ಲ 16 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 69 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಿಳೆಯರು, ಪುರುಷರು ಅಖಾಡದಲ್ಲಿದ್ದು ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಗೆದ್ದಿದ್ದ ಬಹುತೇಕ ಮಹಿಳೆಯರು ಈ ಸಲ ಚುನಾವಣಾ ಕಣದಿಂದ ದೂರ ಉಳಿದಿರುವುದು ವಿಶೇಷ.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರೀ ಮಹಾಲಕ್ಷ್ಮೀ ಗ್ರಾಮ ವಿಕಾಸ ಸಮಿತಿ ಅಸ್ತಿತ್ವಕ್ಕೆ ತಂದು, ಅವಿರೋಧ ಆಯ್ಕೆ ಸೇರಿ ಎಲ್ಲ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಸಮಿತಿ ಅಡಿಯಲ್ಲೇ ಮಹಾಲಕ್ಷ್ಮೀ ದೇವಸ್ಥಾನ ಎದುರೇ ಅವಿರೋಧ ಆಯ್ಕೆಗೊಂಡ ಎಲ್ಲ ಸದಸ್ಯರ ಶಪಥ ಕಾರ್ಯಕ್ರಮ ಸಹ ನಡೆಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಮೊದಲಿನಂತೆ ಇಲ್ಲ. 5 ವರ್ಷದಲ್ಲಿ ವಾತಾವರಣ ಪೂರ್ಣ ಬದಲಾಗಿದೆ. ಹಿಂದಿನದ್ದೆಲ್ಲ ಅನೇಕರು ಮರೆತಿದ್ದಾರೆ. ಯಾರೇ ಗೆದ್ದರೂ ಹಳ್ಳಿ ಹಣೆಬರಹ ಅಷ್ಟೇ ಎಂಬ ಮನೋಭಾವ ಹಲವರಲ್ಲಿದೆ.
14ನೇ ಹಣಕಾಸು ಯೋಜನೆಯಡಿ ಐದು ವರ್ಷದಲ್ಲಿ ಸುಮಾರು 1.20 ಕೋಟಿ ರೂ. ಅನುದಾನ ಗ್ರಾಪಂಗೆ ಬಂದಿದೆ. ಇದಕ್ಕೆ ಹೊರತಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಸಹ ಸುಮಾರು 1 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ನಡೆದಿವೆ. ಬಂದ ಹಣದಲ್ಲಿ ಬಡಾವಣೆಗಳಿಗೆ ಸಿಸಿ ರಸ್ತೆ, ಚರಂಡಿ, ನೀರಿನ ಸೌಲಭ್ಯ ಇತರೆ ಕೆಲಸ ನಡೆದಿವೆ. ವಿವಿಧ ಯೋಜನೆಯಡಿ 150ಕ್ಕೂ ಹೆಚ್ಚು ಜನರಿಗೆ ಮನೆ ಮಂಜೂರಿ ಸಹ ಮಾಡಲಾಗಿದೆ. ಮಹಿಳಾ ಆಡಳಿತದ ಮೇಲೆ ಹಣ ದುರ್ಬಳಕೆ, ಅಕ್ರಮ ಸೇರಿದಂತೆ ಅಂಥ ಯಾವುದೇ ಗಂಭೀರ ಆರೋಪ ಕೇಳಿಬರದಿರುವುದು ಮಹತ್ವದ ಸಂಗತಿ.
ಇಬ್ಬರಿಗೊಲಿದ ಅಧ್ಯಕ್ಷ ಸ್ಥಾನ
ಕಳೆದ ಅವಧಿಯಲ್ಲಿ ತೂಗಾಂವ್ ನ ಕಮಲಾಬಾಯಿ, ಮೀನಾಬಾಯಿ, ಅಯೋಧ್ಯಾಬಾಯಿ, ನಿರ್ಮಲಾ, ಮಂಗಲಾಬಾಯಿ, ಸುನಿತಾ, ಜೈನತ್ ಬಿ, ಸರೋಜಾ, ಪ್ರಭಾವತಿ, ಶಕುಂತಲಾ, ಧರ್ಮಪ್ರಿಯಾ, ವಂದನಾ ಹಾಗೂ ಶ್ರೀಮಾಳಿ ಗ್ರಾಮದ ಶಮೀಮ್ ಬಿ, ಪ್ರಭಾವತಿ, ಕೇಸರಬಾಯಿ ಮತ್ತು ಮಂಗಲಾ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಐದು ವರ್ಷದ ಅವಧಿಗೆ ನೇಮಕ ನಡೆದಿತ್ತು. ಆದರೆ ಎರಡೂವರೆ ವರ್ಷವಾಗುತ್ತಲೇ ಅಧ್ಯಕ್ಷ ಕುರ್ಚಿಗೆ ಕಿತ್ತಾಟ ನಡೆದಿದೆ. ಮೊದಲ 30 ತಿಂಗಳ ಅವಧಿಗೆ ಸುನಿತಾ ಅಧ್ಯಕ್ಷರಾದರೆ, ಉಳಿದ ಅವಧಿ ವಂದನಾ ದತ್ತು ಅವರಿಗೆ ಸಿಕ್ಕಿತು. ಉಪಾಧ್ಯಕ್ಷ ಸ್ಥಾನ ಐದು ವರ್ಷ ಮೀನಾಬಾಯಿ ಅವರೇ ನಿರ್ವಹಿಸಿದರು.
ಆದರ್ಶವಾಗಲಿಲ್ಲ ಗ್ರಾಮ
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತೂಗಾಂವ್ ದತ್ತು ಪಡೆಯುವುದಾಗಿ ಸಂಸದ ಭಗವಂತ ಖೂಬಾ ಅವರು ಘೋಷಣೆ ಮಾಡಿದ್ದರು. ಮಹಿಳಾಮಣಿಗಳ ಆಯ್ಕೆಯ ನಂತರ ಗ್ರಾಮದಲ್ಲಿ 2015ರಲ್ಲಿ ಆಯೋಜಿಸಿದ ನೂತನ ಸದಸ್ಯರ ಶಪಥ ಕಾರ್ಯಕ್ರಮದಲ್ಲಿ ಖೂಬಾ ಅವರು ಪಾಲ್ಗೊಂಡು ಭಾಷಣ ಮಾಡಿದಾಗ ಈ ಘೋಷಣೆ ಮಾಡಿದ್ದರು. ಆದರೆ ಈವರೆಗೆ ತೂಗಾಂವ್ ಆದರ್ಶವಾಗಲಿಲ್ಲ. ಘೋಷಣೆ ಮಾಡಿದ್ದಷ್ಟೇ ಸಾಧನೆ ಎನ್ನುವಂತಾಗಿದೆ. ಈ ಘೋಷಣೆಯನ್ನು ಮಾಡಿ ಐದು ವರ್ಷವಾದರೂ ಆದರ್ಶ ಗ್ರಾಮ ಯೋಜನೆಯಡಿ ತೂಗಾಂವ್ ತೆಗೆದುಕೊಳ್ಳಲಿಲ್ಲ. ನಮ್ಮೂರಿನ ಕಡೆ ಸಂಸದರು ನಂತರ ನೋಡಲೇ ಇಲ್ಲ ಎಂದು ಬೇಸರದಿಂದ ಹೇಳುತ್ತಾರೆ ಸ್ಥಳೀಯರು.
ಜಾರಿಗೆ ಬರದ ಕ್ರಿಯಾಯೋಜನೆ
ಪುರುಷರು ಗೆದ್ದರೆ ರಾಜಕೀಯ ಮಾಡಬಹುದು ಎನ್ನುವ ಕಾರಣಕ್ಕೆ ಎಲ್ಲ ಸ್ಥಾನಗಳಲ್ಲಿ ಮಹಿಳೆಯರನ್ನೇ ಗೆಲ್ಲಿಸಲಾಗಿತ್ತು. ಗ್ರಾಮದ ಸಮಗ್ರ ವಿಕಾಸಕ್ಕೆ ಪೂರಕವಾಗಿ ಶ್ರೀ ಮಹಾಲಕ್ಷ್ಮೀ ಗ್ರಾಮ ವಿಕಾಸ ಸಮಿತಿ ಅಡಿ 31 ಅಂಶಗಳುಳ್ಳ ವಿಶೇಷ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ ಕ್ರಿಯಾಯೋಜನೆ ಕಾಗದದಲ್ಲೇ ಉಳಿಯುವಂತಾಗಿದೆ. ಕೆಲ ಮಹಿಳಾ ಸದಸ್ಯರಿಗೆ ಅಕ್ಷರ ಜ್ಞಾನದ ಕೊರತೆಯಾದರೆ, ಇನ್ನೂ ಕೆಲವರಿಗೆ ಗ್ರಾಪಂ ಕಾರ್ಯಚಟುವಟಿಕೆ ತಿಳಿದುಕೊಳ್ಳಲು ಸಮಯ ಹಿಡಿಯಿತು. ಇದಕ್ಕೂ ಮುಖ್ಯವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ವಿಶೇಷ ಗ್ರಾಪಂ ಕಡೆಗೆ ಆಸಕ್ತಿ ವಹಿಸಲಿಲ್ಲ. ಹೀಗಾಗಿ ಗ್ರಾಮದ ಸಂಪೂರ್ಣ ಅಭಿವೃದ್ಧಿ ಧ್ಯೇಯ ಹಾಗೇ ಉಳಿದಿದೆ. ಕಳೆದ ಚುನಾವಣೆಯಲ್ಲಿ ಮಹಿಳೆಯರನ್ನೇ ಸದಸ್ಯರಾಗಿ ಮಾಡುವ ಹಾಗೂ ಅವಿರೋಧ ಆಯ್ಕೆಗೆ ಪ್ರಮುಖ ಕಾರಣ ಗ್ರಾಮದವರಾದ ಪುಣೆಯ ಉದ್ಯಮಿ ಸುಭಾಷ ನೇಳಗೆ. ಸ್ವಗ್ರಾಮದ ಮೇಲಿನ ಕಾಳಜಿ, ಸೇವಾ ಮನೋಭಾವದಿಂದ ನೇಳಗೆ ಅವರು ಆಗಾಗ್ಗೆ ಗ್ರಾಮಕ್ಕೆ ಬಂದು ಅಭಿವೃದ್ಧಿ ಕಾರ್ಯ ಮಾಡುತ್ತಾರೆ. ಇವರ ಆಸಕ್ತಿ ಫಲವಾಗಿ ಇಲ್ಲಿ ಶ್ರೀ ಮಹಾಲಕ್ಷ್ಮೀ ಗ್ರಾಮ ವಿಕಾಸ ಸಮಿತಿ ಅಸ್ತಿತ್ವಕ್ಕೆ ತರಲಾಗಿತ್ತು. ಮಹಿಳಾ ಸದಸ್ಯರನ್ನೇ ಆಯ್ಕೆ ಮಾಡಬೇಕೆಂದು ಗ್ರಾಮಸ್ಥರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಕಾರ್ಯರೂಪಕ್ಕೆ ತರಲಾಗಿತ್ತು. ಈ ಸಲ ನೇಳಗೆ ಅವರು ಊರ ಉಸಾಬರಿಗೆ ಬರಲಿಲ್ಲ.
ಮಹಾರಾಷ್ಟ್ರ ಸೆರಗಿನಲ್ಲಿ ಗ್ರಾಮ
ತೂಗಾಂವ್ ಮಹಾರಾಷ್ಟ್ರದ ಸೆರಗಿನಲ್ಲಿದೆ. ಈ ಗ್ರಾಮದಿಂದ ಮಹಾರಾಷ್ಟ್ರ ಕೇವಲ 1 ಕಿಮೀ ಅಂತರದಲ್ಲಿದೆ. ತೂಗಾಂವ್ ಜನರಿಗೆ ಕರ್ನಾಟಕ ಬಲು ದೂರ. ತಾಲೂಕು ಕೇಂದ್ರ ಭಾಲ್ಕಿಯಿಂದ ತೂಗಾಂವ್ 40 ಕಿಮೀ ದೂರವಿದೆ. ಜಿಲ್ಲಾ ಕೇಂದ್ರ ಬೀದರ್ ಗೆ 2 ಗಂಟೆ ಬೇಕು. ಪ್ರತಿ ಕೆಲಸ ಹಾಗೂ ವ್ಯಾಪಾರ, ಉದ್ಯೋಗಕ್ಕಾಗಿ ತೂಗಾಂವ್ ಗ್ರಾಮಸ್ಥರು ನೆಚ್ಚಿಕೊಂಡಿದ್ದು ಮಹಾರಾಷ್ಟ್ರ ರಾಜ್ಯವನ್ನೇ. 1 ಕಿಮೀ ಅಂತರದಲ್ಲಿ ಮಹಾರಾಷ್ಟ್ರದ ಹಲಸಿ ಗ್ರಾಮವಿದೆ (ಮಧ್ಯೆ ಮಾಂಜ್ರಾ ನದಿ). ಹೀಗಾಗಿ ಈ ಗ್ರಾಮಕ್ಕೆ ಹಲಸಿ ತೂಗಾಂವ್ ಎಂದೇ ಕರೆಯುತ್ತಾರೆ. ಸ್ಥಳೀಯ ಬಹುತೇಕರು ಮರಾಠಿ ಮಾತನಾಡುತ್ತಾರೆ. ಕನ್ನಡ ಅಷ್ಟಕ್ಕಷ್ಟೇ. ಮಹಿಳಾ ಆಡಳಿತದ ಗ್ರಾಪಂ ಕಾರಣಕ್ಕೆ ಈ ಗಡಿ ಊರನ್ನು ಮಾದರಿ ಮಾಡಿ ತೋರಿಸುವ ಅವಕಾಶ ಜಿಲ್ಲಾಡಳಿತ, ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳಿಗಿತ್ತು. ಆದರೆ ಅದನ್ನು ಬಳಸಿಕೊಳ್ಳುವ ಪ್ರಯತ್ನ ಯಾರಿಂದಲೂ ಆಗಿಲ್ಲ.
ದುಂದು ವೆಚ್ಚ, ವೈಮನಸ್ಸು, ಜಗಳ ಬೇಡ ಹಾಗೂ ಗ್ರಾಮದ ಸರ್ವಾಂಗೀಣ ವಿಕಾಸದ ನಿಟ್ಟಿನಲ್ಲಿ 2015ರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಆದರೆ ಕಳೆದ ಚುನಾವಣೆಯಂಥ ಪರಿಸ್ಥಿತಿ ಈಗಿಲ್ಲ. ಈ ಬಾರಿ ಎಲ್ಲ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಒಬ್ಬರನ್ನೊಬ್ಬರು ಕುಸ್ತಿಗೆ ಬಿದ್ದಿದ್ದಾರೆ. ಈ ಸಲವೂ ಅವಿರೋಧ ಆಯ್ಕೆ ಅಥವಾ ಮಹಿಳೆಯರನ್ನೇ ಅವಕಾಶ ಕೊಟ್ಟಿದ್ದರೆ ಉತ್ತಮವಿರುತ್ತಿತ್ತು.| ಲಕ್ಷ್ಮಣ ಬಗ್ದೂರಿ, ಸ್ಥಳೀಯ ಮುಖಂಡ
ನಮಗೆ ಸಿಕ್ಕ ಅವಕಾಶದ ಸದ್ಬಳಕೆಗೆ ಪ್ರಯತ್ನಿಸಿದ್ದೇವೆ. ಬಂದ ಅನುದಾನ ಗ್ರಾಮದ ವಿಕಾಸಕ್ಕೆ ವಿನಿಯೋಗಿಸಿದ್ದೇವೆ. ರಸ್ತೆ, ಚರಂಡಿ ಇತರೆ ಸೌಲಭ್ಯ ಒದಗಿಸಲಾಗಿದೆ. ಹೊಸ ಪಂಚಾಯಿತಿ ಕಟ್ಟಡ, ಪೈಪ್ ಲೈನ್ ಸೇರಿ ಕೆಲವು ಕೆಲಸ ಬಾಕಿ ಉಳಿದಿವೆ. ಮಹಿಳಾ ಆಡಳಿತದ ಪಂಚಾಯಿತಿಗೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬರಲಿಲ್ಲ. ಈ ಸಲದ ಚುನಾವಣೆಯಿಂದ ದೂರ ಉಳಿದಿದ್ದೇನೆ.| ಮೀನಾಬಾಯಿ ಪಂಢರಿ ತೂಗಾಂವ್ ಗ್ರಾಪಂ ಮಾಜಿ ಉಪಾಧ್ಯಕ್ಷೆ