ಚಾಮರಾಜನಗರ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನೂತನ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿಬಂದಿದ್ದು, ಸುಮಾರು 5 ಕೋಟಿ ರೂ, ವೆಚ್ಚದ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 2013-14 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, 2017 ರವರೆಗೂ ಶ್ರೀಭುವನೇಶ್ವರಿ ವೃತ್ತದಲ್ಲಿರುವ ಪೇಟೆ ಪ್ರೈಮರಿ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ಬಳಿಕ ರೇಷ್ಮೆ ಇಲಾಖೆಯ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಗೊಳಿಸಲಾಗಿತ್ತು. ಪ್ರಸ್ತುತ ಕಾಲೇಜಿನಲ್ಲಿ ಬಿ.ಎ, ಬಿಎಸ್ಸಿ ಮತ್ತು ಬಿ.ಕಾಂ ವಿಭಾಗದಿಂದ ಒಟ್ಟು 495 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅಗತ್ಯವಾದ ತರಗತಿ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ ಹಾಗೂ ಇನ್ನಿತರೆ ಕೊಠಡಿಗಳು ಇಲ್ಲದೇ ಹಲವಾರು ವರ್ಷಗಳಿಂದ ನೂತನ ಕಾಲೇಜು ಕಟ್ಟಡದ ನಿರ್ಮಾಣಕ್ಕೆ ಒತ್ತಾಯ ಕೇಳಿಬರುತ್ತಿತ್ತು.
ಅದರಂತೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲರ ನಿರಂತರ ಪ್ರಯತ್ನದಿಂದಾಗಿ ನೂತನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಅದರಂತೆ ರೇಷ್ಮೆ ಇಲಾಖೆ ಸುಮಾರು 1.18 ಎಕರೆ ಜಾಗದಲ್ಲಿ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ(ಪಿಎಂ ಉಷಾ) ಯೋಜನೆಯಡಿಯಲ್ಲಿ ಸಮಾರು 5 ಕೋಟಿ ರೂ, ಅನುದಾನ ಮಂಜೂರಾಗಿದ್ದು, ನೂತನ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹಳೆಯ ಪಶು ಆಸ್ಪತ್ರೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಹಾಗೂ ಬೋರ್‌ವೆಲ್ ಕೊರೆಸುವ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಮಹದೇವಸ್ವಾಮಿ ವಿಜಯವಾಣಿಗೆ ಮಾಹಿತಿ ನೀಡಿದರು.
ಜಿ ಪ್ಲಸ್ ಮಾದರಿ 3 ಅಂತಸ್ತಿನ ಕಟ್ಟಡ:
ಪ್ರಸ್ತುತ ಕಾಲೇಜು ಕಟ್ಟಡ ಇರುವ 1.18 ಎಕರೆ ಜಾಗದಲ್ಲಿ ಹಿಂಬದಿಯಿಂದ ಮೊದಲ ಹಂತದಲ್ಲಿ ಜಿ ಪ್ಲಸ್ ಮಾದರಿಯ 3 ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದೆ. ಪಿಎಂ ಉಷಾ ಯೋಜನೆಯಡಿ ಸುಮಾರು 5 ಕೋಟಿ ರೂ, ಅನುದಾನದಲ್ಲಿ 4 ಕೋಟಿ ರೂ, ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಉಳಿದ 1 ಕೋಟಿ ರೂ, ಅನುದಾನದಲ್ಲಿ ಅಗತ್ಯ ಪೀಠೋಪಕರಣಗಳನ್ನು ಖರೀದಿ ಮಾಡಲಾಗುತ್ತದೆ. ಜಿ-ಪ್ಲಸ್ ಮಾದರಿಯ 3 ಅಂತಸ್ತಿನ ಕಟ್ಟಡದಲ್ಲಿ ತಳಅಂತಸ್ತಿನಲ್ಲಿ ಪ್ರಾಂಶುಪಾಲರ ಕೊಠಡಿ, ಗ್ರಂಥಾಲಯ, ಸ್ಕೌಟ್ಸ್ ಮತ್ತು ಗೈಡ್ಸ್ ಕೊಠಡಿ, ರೆಕಾರ್ಡ್ ರೂಂ ಹಾಗೂ ಇನ್ನಿತರೆ ಕೊಠಡಿಗಳು ಇರಲಿದೆ. ಮೊದಲನೇ ಮಹಡಿಯಲ್ಲಿ 3 ಪ್ರಯೋಗಾಲಯ ಕೊಠಡಿ, 2 ತರಗತಿ ಕೊಠಡಿ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯಗಳು ನಿರ್ಮಾಣವಾಗಲಿದೆ. ಎರಡನೇ ಅಂತಸ್ತಿನಲ್ಲಿ 1 ಪ್ರಯೋಗಾಲಯ ಕೊಠಡಿ ಹಾಗೂ ತರಗತಿ ಕೊಠಡಿಗಳು ಇರಲಿದೆ. ಮುಂದಿನ ದಿನಗಳಲ್ಲಿ ಈಗ ಇರುವ ಪಶು ಚಿಕಿತ್ಸಾಲಯ ಕೊಠಡಿಗಳನ್ನು ತೆರವುಗೊಳಿಸಿ ಮತ್ತಷ್ಟು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ.
1.5 ರೂ, ವೆಚ್ಚದಲ್ಲಿ ಯೋಗಶಾಲೆ:
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ಅಂದಾಜು 1.5 ಕೋಟಿ ರೂ, ವೆಚ್ಚದಲ್ಲಿ ಯೋಗಶಾಲೆ ಮಂಜೂರಾಗಿದೆ. ಅದಲ್ಲದೇ ಸುಮಾರು 1 ಕೋಟಿ ರೂ, ವೆಚ್ಚದಲ್ಲಿ ಅತ್ಯಾಧುನಿಕ ಮಹಿಳಾ ವಿಶ್ರಾಂತಿ ಕೊಠಡಿಯೂ ಮಂಜೂರಾಗಿದ್ದು, ಅನುದಾನ ಬಿಡುಗಡೆಯಾಗಬೇಕಿದೆ. ಪ್ರಸ್ತುತ ಕಾಲೇಜಿನಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ವಿಭಾಗಗಳು ಇದ್ದು, ಮುಂದಿನ ವರ್ಷಗಳಿಂದ ಜೀವರಾಸಾಯನ ಶಾಸ, ಸಾರ್ವಜನಿಕ ಆಡಳಿತ ಅಥವಾ ಹೋಟೆಲ್ ಮ್ಯಾನೇಜ್‌ಮೆಂಟ್ ವಿಷಯಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಮೂಲಕ ಗಡಿಭಾಗದ ಹೆಣ್ಣು ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ನೀಡಲು ಹಂತಹಂತವಾಗಿ ಕ್ರಮವಹಿಸಲಾಗುತ್ತಿದೆ.
ಹಳೆಯ ಕಟ್ಟಡಗಳ ತೆರವು:
ಸದ್ಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ನೂತನ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಇರುವ ಪಶು ಸಂಗೋಪನಾ ಇಲಾಖೆಯ ಹಳೆಯ ಕಟ್ಟಡಗಳನ್ನು ತೆರವು ಗೊಳಿಸಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣವಾದ ಬಳಿಕ ಪಶು ಆಸ್ಪತ್ರೆಯ ಕಟ್ಟಡವನ್ನು ತೆರವುಗೊಳಿಸಿ ಸಂಪೂರ್ಣ 1.18 ಎಕರೆ ಜಾಗದಲ್ಲಿ ಕಾಲೇಜು ಕಟ್ಟಡ ಹಾಗೂ ಮೈದಾನಕ್ಕೆ ಜಾಗವನ್ನು ಮೀಸಲಿಡಲಾಗುತ್ತದೆ.
ಪ್ರಸ್ತುತ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತರಗತಿಗಳನ್ನು ನಡೆಸಲಾಗುತ್ತಿದೆ. ನೂತನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಂದಾಜು 5 ಕೋಟಿ ರೂ, ಅನುದಾನ ಬಿಡುಗಡೆಯಾಗಿದೆ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಮಯವನ್ನು ನಿಗದಿಪಡಿಸಿಕೊಂಡು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.
-ಡಾ.ಮಹದೇವಸ್ವಾಮಿ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಚಾಮರಾಜನಗರ