ಮೈಸೂರು: ಐಪಿಎಸ್ ಅಧಿಕಾರಿ ಟಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬಹಿರಂಗ ಜಟಾಪಟಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಅಸಹಾಯಕತೆ ಪ್ರದರ್ಶಿಸಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ದೂರಿದರು.
ಸರ್ಕಾರ ಇದೆಲ್ಲವನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ಇಂತಹ ವಾತಾವರಣದಿಂದ ಸಾರ್ವಜನಿಕವಾಗಿ ಕೆಟ್ಟ ಪರಿಣಾಮ ಬೀರಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸರ್ಕಾರಿ ನೌಕರರ ನಡವಳಿಕೆಗಳು ಸರ್ಕಾರದ ಒಂದು ಭಾಗವೇ ಆಗಿರುತ್ತದೆ. ಸರ್ಕಾರ ಈ ಕೂಡಲೇ ಶಿಸ್ತಿನ ಕ್ರಮ ಜರುಗಿಸುವುದು ಅತಿ ಜರೂರಿನ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.
ಈ ಇಬ್ಬರು ಅಧಿಕಾರಿಗಳ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಅಪಹಾಸ್ಯಕ್ಕೀಡಾಗಿದೆ. ಐಎಎಸ್ ಹಾಗೂ ಐಪಿಎಸ್‌ನಂತಹ ಭಾರತದ ಪ್ರತಿಷ್ಠಿತ ವಿದ್ಯಾರ್ಹತೆಯನ್ನು ಗಳಿಸಿರುವ ಇಬ್ಬರು ಮಹಿಳೆಯರ ವರ್ತನೆ ಸಾರ್ವಜನಿಕರಲ್ಲಿ ಚರ್ಚೆಗೆ ಒಳಪಟ್ಟಿದೆ. ಇಬ್ಬರ ಜ್ಞಾನವು ಸಮಾಜದ ಒಳಿತಿಗೆ, ಏಳಿಗೆಗೆ ಉಪಯೋಗವಾಗದೆ ವೈಯಕ್ತಿಕ ದ್ವೇಷದಿಂದ ಅವರ ನಿಜವಾದ ಮುಖವಾಡಗಳು ಕಳಚಿ ಬಿದ್ದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಎಎಸ್, ಐಪಿಎಸ್ ಪಡೆದಿರುವ ವ್ಯಕ್ತಿಗಳ ಬಗ್ಗೆ ಇವರ ನಡವಳಿಕೆಗಳಿಂದ ಅಪಚಾರವಾಗಿದೆ. ದೇಶದ ಅತ್ಯುನ್ನತ ಶಿಕ್ಷಣದ ಪಡೆದ ಈ ಮಹಿಳೆಯರು ತಮ್ಮ ವ್ಯಕ್ತಿತ್ವ, ತಮ್ಮ ಅಂತಃಕರಣದ ಸೇವೆ ಮೂಲಕ ಜನಸಾಮಾನ್ಯರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿ ವಿದ್ಯಾವಂತರಿಗೆ ಆದರ್ಶಪ್ರಾಯರಾಗಿ ಕಾಣಬೇಕಾದವರು. ತಮ್ಮ ಬಗ್ಗೆ ಜನ ತಪ್ಪು ಅಭಿಪ್ರಾಯದಲ್ಲಿ ನೋಡುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿರುವುದು ನಿಜಕ್ಕೂ ದುರದೃಷ್ಟ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತರ ಮಹಿಳಾ ಉದ್ಯೋಗ ಆಕಾಂಕ್ಷಿಗಳು ಅನುಸರಿಸುವಂತಹ ವ್ಯಕ್ತಿತ್ವ ಹೊಂದಿದ್ದವರಾಗಿರಬೇಕಿತ್ತು. ಬೀದಿ ಕಾಳಗದಲ್ಲಿ ತೊಡಗಿಸಿಕೊಂಡಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ ಎಂದು ಹೇಳಿದ್ದಾರೆ.