ಬೀದರ್: ಅಖಿಲ ಭಾರತ ಅಂಚೆ ನೌಕರರ ಸಂಘಟನೆಯಿಂದ ಸೆ.10 ಮತ್ತು 11ರಂದು ನಗರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ ಎಂದು ಸಂಘಟನೆಯ ಬೀದರ್ ವಿಭಾಗದ ಅಧ್ಯಕ್ಷೆ ಮಂಗಲಾ ಭಾಗವತ್ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ದೇಶದ ವಿವಿಧೆಡೆಯ ಮಹಿಳಾ ಅಂಚೆ ನೌಕರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿ ಸತ್ಕಾರ ಸೇರಿ ಸರ್ವ ರೀತಿಯಿಂದ ಸಮಾವೇಶ ಯಶಸ್ವಿಗೊಳಿಸಲು ಸಂಘಟನೆ ಪದಾಕಾರಿಗಳು ವಿವಿಧ ಸಿದ್ಧತಾ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಮಹಿಳೆಯರನ್ನು ಇಲಾಖೆ ಮುಖ್ಯ ವಾಹಿನಿಗೆ ತರುವುದು ಮತ್ತು ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದು ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.ನವದೆಹಲಿಯ ಶ್ರೀನಿವಾಸ್ ಮಾತನಾಡಿ, ಕರ್ನಾಟಕದಲ್ಲೇ ಬೀದರ್ ನಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶ ನಡೆಯಲಿದೆ. ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೋರಿದರು.
ಸಂಘಟನೆಯ ಕರ್ನಾಟಕ ವಲಯ ಕಾರ್ಯದರ್ಶಿ ಜಾನಕಿರಾಂ, ಬೆಂಗಳೂರಿನ ಕೃಷ್ಣಮೂರ್ತಿ ಮಾತನಾಡಿದರು. ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಗುಂಡಪ್ಪ ಕನಕ, ಚಿದಾನಂದ ಕಟ್ಟಿ, ಸುಧಾಕರ, ಭರತ, ಗುರುರಾಜ, ಅಭಿನವ, ವೀಣಾ ಕೆ.ವಿ. ಉಪಸ್ಥಿತರಿದ್ದರು. ಸುಭಾಷ ದೊಡ್ಡಿ ಸ್ವಾಗತಿಸಿದರು. ಕಲ್ಲಪ್ಪ ಕೋನಿ ವಂದಿಸಿದರು.
ಸ್ವಾಗತ ಸಮಿತಿಗೆ ಖದೀರ್ ಅಧ್ಯಕ್ಷ: ಸಭೆಯಲ್ಲಿ ರಾಷ್ಟ್ರಮಟ್ಟದ ಮಹಿಳಾ ಅಂಚೆ ನೌಕರರ ಸಮಾವೇಶ ನಿಮಿತ್ತ ಸ್ವಾಗತ ಸಮಿತಿ ರಚಿಸಿ ಪದಾಕಾರಿಗಳ ಆಯ್ಕೆ ಮಾಡಲಾಯಿತು. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಂಗಲಾ ಭಾಗವತ್, ಕಾರ್ಯದರ್ಶಿಗಳಾಗಿ ಸುಮನ್, ಚೈತ್ರಾ ಅವರನ್ನು ಆಯ್ಕೆ ಮಾಡಲಾಯಿತು.