ಚಿಕ್ಕಬಳ್ಳಾಪುರ : ತಾಲೂಕಿನ ಅರಿಕೆರೆ (ಸೂಸೇಪಾಳ್ಯ) ಮಹಿಮಾ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದ ಯೇಸು ಶಿಲುಬೆಗಳನ್ನು ಜಿಲ್ಲಾಡಳಿತ ಬುಧವಾರ ತೆರವುಗೊಳಿಸಿತು.
ಸರ್ಕಾರಿ ಜಮೀನಿನಲ್ಲಿ ಅನುಮತಿ ಪಡೆಯದೆ ಶಿಲುಬೆಗಳನ್ನು ಪ್ರತಿಷ್ಠಾಪಿಸಿ, ಸ್ಥಳೀಯರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದ ಹಿಂದುಪರ ಸಂಘಟನೆಗಳು, ಅಕ್ರಮ ಒತ್ತುವರಿ ತೆರವುಗೊಳಿಸಲು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು ನ್ಯಾಯಾಧೀಶರ ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ರಾಮನಗರದ ಕಪಾಲ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಲು ಕ್ರಿಶ್ಚಿಯನ್ ಸಮುದಾಯದವರಿಗೆ ಗೋಮಾಳ ಜಾಗ ನೀಡುವುದನ್ನು ವಿರೋಧಿಸಿ ಹೋರಾಟಗಳನ್ನು ಕೈಗೊಂಡ ಸಂದರ್ಭದಲ್ಲಿಯೇ ಇಲ್ಲಿ ವಿವಾದ ಹುಟ್ಟಿಕೊಂಡಿತ್ತು. ಸರ್ಕಾರಿ ಜಮೀನಿನಲ್ಲಿ ಚರ್ಚ್ ನಿರ್ಮಾಣ, ಶಿಲುಬೆ ಸ್ಥಾಪನೆಗೆ ಸರ್ಕಾರ ಅನುಮತಿ ನೀಡದಿರುವುದರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ದೃಢಪಡಿಸಿಕೊಂಡ ಹಿಂದುಪರ ಸಂಘಟನೆ ಮುಖಂಡರು, ಇಲ್ಲಿನ ಬೆಟ್ಟದ ತಪ್ಪಲಿನಲ್ಲಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿ ಹುಣ್ಣಿಮೆ, ವಿಶೇಷ ದಿನಗಳಂದು ಪೂಜೆ, ಭಜನೆ ನಡೆಯುತ್ತದೆ. ಬೆಟ್ಟದಲ್ಲಿ ಜಾತ್ರಾ ಮಹೋತ್ಸವಗಳನ್ನು ಕೈಗೊಳ್ಳಲಾಗುತ್ತದೆ. ಇದರ ನಡುವೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ತೆರವುಗೊಳಿಸಿ, ಮತಾಂತರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರೆ, ಮತ್ತೊಂದೆಡೆ ವಿವಾದವನ್ನು ಅನವಶ್ಯಕವಾಗಿ ಎಬ್ಬಿಸಿ, ಸೌಹಾರ್ದತೆ ಹಾಳುಗೆಡವಲಾಗುತ್ತಿದೆ ಎಂದು ಕ್ರೈಸ್ತ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿಗಿ ಭದ್ರತೆಯಲ್ಲಿ ತೆರವು : ಧಾರ್ಮಿಕ ಸೂಕ್ಷ್ಮ ವಿಚಾರದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಬೆಟ್ಟದ ಮೇಲೆ ಜನ ಸೇರುವುದಕ್ಕೆ ನಿರ್ಬಂಧ ಹೇರಲಾಯಿತು. ತಾಂತ್ರಿಕ ಸಿಬ್ಬಂದಿ ಕರೆಸಿಕೊಂಡು ಶಿಲುಬೆ ಸೇರಿ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ, ಸಾಗಿಸಲಾಯಿತು. ಡಿವೈಎಸ್ಪಿ ರವಿಶಂಕರ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ಧಿಕ್ಕಾರದ ಘೋಷಣೆ : ತೆರವು ಕಾರ್ಯಾಚರಣೆ ಬಗ್ಗೆ ಮೊದಲೇ ಸಂಬಂಧಪಟ್ಟ ಸಮುದಾಯದ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಸ್ಥಳಕ್ಕೆ ಬಂದ ಸ್ಥಳೀಯರು ರಾಜ್ಯ ಬಿಜೆಪಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ವಿರುದ್ಧ ಘೋಷಣೆ ಕೂಗಿದರು. ಹಲವು ವರ್ಷಗಳಿಂದಲೂ ಇರುವ ಶಿಲುಬೆಯನ್ನು ತೆರವುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ನ್ಯಾಯಾಲಯ ಆದೇಶ, ಅಕ್ರಮ ಒತ್ತುವರಿ ತೆರವು ಅನಿವಾರ್ಯತೆಯ ಬಗ್ಗೆ ಹೇಳಿ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಸಮಾಧಾನಪಡಿಸಿದರು.