ಜಿಲ್ಲೆ

ಮಹಾಸಭಾದಿಂದ ಪ್ರತ್ಯೇಕ ಗಣತಿ, ಕಾನೂನು ಹೋರಾಟ

ಬಾಗಲಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ತಮ್ಮ ಹಿಂದಿನ ಅವಽಯಲ್ಲಿ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಒಡೆಯುವ ಕೆಲಸ ಮಾಡಿದ್ದರು. ಈಗ ತಮಗೆ ಬೇಕಾದ ರೀತಿಯಲ್ಲಿ ಜಾತಿ ಗಣತಿ ವರದಿ ಮಾಡಿಸಿ ನಮ್ಮ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸುವ ಷಡ್ಯಂತ್ರ ನಡೆಸಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಜಾತಿ ಗಣತಿ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ, ಅವೈಜ್ಞಾನಿಕವಾಗಿ ಮಾಡಿರುವ, ದುರುದ್ದೇಶದಿಂದ ಕೂಡಿರುವ ಈ ವರದಿ ಬಗ್ಗೆ ಮಹಾಸಭಾದ ವಿರೋಧ ಇದೆ. ಇದನ್ನು ವಿರೋಧ ಮಾಡುತ್ತೇವೆ. ಹಾಗೆಯೇ ಕಾನೂನು ಹೋರಾಟವನ್ನು ನಡೆಸುತ್ತೇವೆ. ಜತೆಗೆ ಮಹಾಸಭಾದಿಂದ ಪ್ರತ್ಯೇಕವಾಗಿ ನಮ್ಮ ಸಮುದಾಯದ ಗಣತಿಯನ್ನು ಮಾಡುತ್ತೇವೆ ಎಂದರು.

೨೦೧೩ ರಿಂದ ೧೮ ರವರೆಗೆ ಸಿದ್ದರಾಮಯ್ಯ ಸಿಎಂ ಇದ್ದಾಗ ವೀರಶೈವ ಲಿಂಗಾಯತರನ್ನು ಬೇರೆ ಬೇರೆ ಮಾಡಲು ಹೊರಟಿದ್ದರು. ಅಲ್ಲದೆ, ಆ ಮಕ್ಕಳಿಗೆ ಪ್ರವಾಸ, ಈ ಮಕ್ಕಳಿಗೆ ಪ್ರವಾಸ ಇಲ್ಲವೆಂದು ಮಕ್ಕಳಲ್ಲೂ ತಾರತಮ್ಯ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಪ್ರತ್ಯೇಕ ಮಾಡುವುದು ಅವರ ಚಾಳಿಯಾಗಿದೆ. ಕಲುಷಿತ ಮನಸ್ಸು ಇದ್ದಾಗ ಆ ರೀತಿ ವಿಚಾರ ಮಾಡುತ್ತಾರೆ ವಿನಾ ಒಳ್ಳೆಯದಾಗುವ ಕೆಲಸವನ್ನು ಮಾಡಲು ಅವರಿಗೆ ಆಗಲ್ಲ ಎಂದು ಕಿಡಿಕಾರಿದರು.
ಈವರೆಗೂ ನಮ್ಮ ಮನೆಗೆ ಜಾತಿ ಗಣತಿ ಮಾಡಲು ಯಾರೂ ಬಂದಿಲ್ಲ. ಇಲ್ಲಿ ಇಷ್ಟೊಂದು ಜನ ಪತ್ರಕರ್ತರು ಇದ್ದೀರಿ. ನಿಮ್ಮ ಮನೆಗೆ ಯಾರಾದರೂ ಬಂದಿದ್ದರಾ? ಇದನ್ನೇ ಮೊನ್ನೆ ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ. ಜಾತಿ ಗಣತಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಅದಕ್ಕೆ ನಮ್ಮ ವಿರೋಧ ಇದೆ. ತಮಗೆ ಅಽಕಾರ ಇದೆ ಎಂದ ಮಾತ್ರಕ್ಕೆ ತಮಗೆ ತೋಚಿದಂತೆ ವರದಿ ತರಿಸಿಕೊಳ್ಳುವುದಕ್ಕೆ ಜಾತಿ ಗಣತಿ ಎನ್ನುವುದಿಲ್ಲ ಎಂದರು.

ವೀರಶೈವ ಲಿಂಗಾಯತರಲ್ಲಿ ಅನೇಕ ಉಪಪಂಗಡಗಳು ಇವೆ. ಸರ್ಕಾರದ ಸೌಲಭ್ಯ ಪಡೆಯಲು ತಮ್ಮ ಒಳಪಂಗಡ ಬರೆಸಿರಬಹುದು. ಹಾಗೆಂದು ಅವರೆಲ್ಲ ವೀರಶೈವ ಲಿಂಗಾಯತರು ಅಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತಾರೆ? ಇದನ್ನೆ ನೆಪವಾಗಿಟ್ಟುಕೊಂಡು ಸಮಾಜಕ್ಕೆ ಅಸ್ತಿತ್ವವೇ ಇಲ್ಲ ಎಂದು ಹೇಳಬಾರದು. ಸಮಾಜವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು. ಈಗ ಅವರಿಗೆ ಅಽಕಾರ ಇದೆ. ಯಾವ ಮಹಾಸಭಾದವರು ಹೇಳಿದರೆ ಅವರು ಕೇಳುತ್ತಾರೆ? ಎಲ್ಲರನ್ನು ಬೇರೆ ಮಾಡಿ ವೀರಶೈವ ಲಿಂಗಾಯರ ಸಂಖ್ಯೆಯನ್ನು ಕುಗ್ಗಿಸುವ ಷಡ್ಯಂತ್ರಕ್ಕೆ ನಮ್ಮ ವಿರೋಧ ಇದೆ. ಹಾಗೆಯೇ ಒಕ್ಕಲಿಗರು ಸಹ ವಿರೋಧ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಾಸಭಾದಿಂದಲೇ ಪ್ರತ್ಯೇಕ ಗಣತಿ ಮಾಡುವುದಾಗಿ ಈಗಾಗಲೇ ಅಧ್ಯಕ್ಷರು ಹೇಳಿದ್ದಾರೆ. ಸದ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳಬಾರದು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದರು.

ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಬಸವರಾಜ ಭಗವತಿ, ಬಸವರಾಜ ಮುಕ್ಕುಪ್ಪಿ ಮತ್ತಿತರರು ಇದ್ದರು.