ಚಿತ್ರದುರ್ಗ: ಕಬೀರಾನಂದಾಶ್ರಮದಲ್ಲಿ ಮಾ. 4ರಿಂದ 9ರವರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಮಹಾಶಿವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಿವಲಿಂಗಾನಂದ ಶ್ರೀ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 94ನೇ ವರ್ಷದ ಮಹೋತ್ಸವದ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಶಿವನ ಆರಾಧನೆಯಿಂದ ಲೋಕಕಲ್ಯಾಣ ಪ್ರಾಪ್ತಿಯಾಗಲಿದೆ ಎಂದರು.
ದೇವರು-ಗುರುವನ್ನು ಪ್ರಸ್ತುತ ದಿನಗಳಲ್ಲಿ ಅನೇಕರು ಮರೆತಿದ್ದಾರೆ. ಮೊಬೈಲ್ ಯುಗದ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಇಲ್ಲವಾಗಿದೆ. ಹೀಗಾಗಿ ಕೆಟ್ಟಿರುವ ಮಾನವನ ಮನಸ್ಸಿಗೆ ಸಂಸ್ಕಾರದ ಬೀಜ ಬಿತ್ತಲು ಆರು ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸನಾತನ ಧರ್ಮ ನಮ್ಮದು. ಪರಶಿವನನ್ನು ರಾತ್ರಿಯಿಡಿ ಧ್ಯಾನಿಸುವುದೇ ಮಹಾಶಿವರಾತ್ರಿಯ ಮಹತ್ವವಾಗಿದೆ. ಈ ಬಾರಿ ಬಹಳಷ್ಟು ಜನರ ಸಹಕಾರ ದೊರೆತಿದೆ. ಯುವ ಬಳಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಾಡಿನ ಪ್ರಸಿದ್ಧ ಮಠಾಧೀಶರನ್ನು ಆಹ್ವಾನಿಸಿದ್ದೇವೆ. ಭಕ್ತಿಯ ಜತೆಗೆ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿವೆ ಎಂದರು.
ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ, 4ರಂದು ಸಂಜೆ 6.30ಕ್ಕೆ ಆರಂಭವಾಗುವ ಕಾರ್ಯಕ್ರಮದ ಸಾನಿಧ್ಯವನ್ನು
ಅಭಿನವ ಸಿದ್ಧಾರೂಢ ಶ್ರೀ, ರಾಮಾನಂದ ಭಾರತಿ ಶ್ರೀ, ಮಾಧವಾನಂದ ಶ್ರೀ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಭಾ ಮಂಟಪ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಎಂಎಲ್ಸಿಗಳಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ನಿವೃತ್ತ ಐಎಎಸ್ ಅಧಿಕಾರಿ ಬಿ.ಭೀಮಯ್ಯ, ಮುಖಂಡರಾದ ಲಿಂಗಮೂರ್ತಿ, ವಿನಯ್ ಆರ್ ತಿಮ್ಮಾಪುರ, ಬಿ.ಕಾಂತರಾಜ್, ಟಿ.ಬದ್ರಿನಾಥ್, ಜಿ.ಟಿ.ಸುರೇಶ್ ಸಿದ್ಧಾಪುರ, ಆಯುಕ್ತ ಸೋಮಶೇಖರ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಉದ್ಯಮಿಗಳಾದ ರೇವಣ್ಣ, ಎಂ.ಎ.ಸೇತೂರಾಂ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ್ರು, ಮಾಜಿ ಸದಸ್ಯ ಎಸ್‌ಎಂಎಲ್ ತಿಪ್ಪೇಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಪರಮೇಶ್, ವಿ.ಎಲ್.ಪ್ರಶಾಂತ್, ಡಿ.ಗೋಪಾಲಸ್ವಾಮಿ ನಾಯಕ, ನಾಗರಾಜ್ ಸಂಗಂ, ಪ್ರತಾಪ್ ಜೋಗಿ, ಓಂಕಾರ್, ರುದ್ರೇಶ್ ಇತರರಿದ್ದರು.