ಬೆಳಗಾವಿ:ನಗರದ ಪ್ರಜಾಪಿತಾ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಮುಂಬರುವ ಮಹಾಶಿವರಾತ್ರಿ ಅಂಗವಾಗಿ 'ಶಿವಸಂದೇಶ' ಶಾಂತಿ ಸದ್ಭಾವನಾ ಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ನಗರದ ಮಹಾಂತೇಷ ನಗರದ ಪ್ರಜಾಪಿತ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಾಂತಿ ಸದ್ಭಾವನಾ ವಾಹನಕ್ಕೆ ಬ್ರಹ್ಮಕುಮಾರಿ ದಾದಿ ಅಂಬಿಕಾ ದೀದಿ ಗುರುವಾರ ಚಾಲನೆ ನೀಡಿದರು.
ಹಿಂದೂ ಜೀವನಪದ್ಧತಿ ಮತ್ತು ಸಂಸ್ಕ್ರತಿಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನಮಾನ ಇದೆ.
ಉಪವಾಸ, ಶಿವನಿಗೆ ಬಿಲ್ವಪತ್ರೆ ಸಮರ್ಪಣೆ ಮತ್ತು ಅಹೋರಾತ್ರಿ ಜಾಗರಣೆಗಳ ಮೂಲಕ ದೇವರ ಹತ್ತಿರ ನಾವು ಸದಾ ಇದ್ದು, ನಮ್ಮ ಅಸುರಿ ಮತ್ತು ಅಸಹಜ ಮನಸ್ಥಿತಿಯನ್ನು ಸಹಜ ಇಟ್ಟುಕೊಳ್ಳುವುದೇ ಮಹಾಶಿವರಾತ್ರಿಯ ಪ್ರಮುಖ ಆಚರಣೆ ಆಗಿದೆ ಎಂದು ದಾದಿ ಅಂಬಿಕಾ ನುಡಿದರು.
ನೂರಾರು ಬ್ರಹ್ಮಕುಮಾರಿ ದಾದಿಯರು ಧರ್ಮಧ್ವಜ ಹೊತ್ತು ಶಾಂತಿ ಸೌಹಾರ್ಧತೆಯ ಘೋಷವಾಕ್ಯಗಳೊಂದಿಗೆ ನಗರದ ಕಾಕತಿವೇಸ್ ರೋಡ್, ಗಣಪತಿ ಗಲ್ಲಿ ಮಾರುತಿ ಗಲ್ಲಿ, ಖಡೇಬಜಾರ್ ಬೋಗಾರವೆಸ್, ಚನ್ನಮ್ಮ ವೃತ್ತದಲ್ಲಿ ಸಾಗಿ ಜನತೆಯ ಗಮನ ಸೆಳೆಯಿತು.
ಬ್ರಹ್ಮಕುಮಾರಿಯರಾದ ದಾದಿ ಮೀನಾಕ್ಷಿ, ದಾದಿ ಸುಲೋಚನಾ, ದಾದಿ ಬಿ. ಕೆ. ರೂಪಾ, ದಾದಿ ಬಿ.ಕೆ. ಸರೋಜಾ, ದಾದಿ ಬಿ.ಕೆ. ಶೋಭಾ, ದಾದಿ ಮಹಾದೇವಿ, ದಾದಿ ಪಾರ್ವತಿ, ಬ್ರಹ್ಮಕುಮಾರರಾದ ಸಹೋದರ ಮಹಾಂತೇಷ ಮತ್ತು ಸಹೋದರ ಶ್ರೀಕಾಂತ ಅವರು ರ್ಯಾಲಿಯಲ್ಲಿ ಭಾಗವಹಿಸಿದರು.