ಗೋಕರ್ಣ: ಒಂಬತ್ತು ದಿನಗಳ ಆಗಮಿಕ ಮಹಾಶಿವರಾತ್ರಿ ಉತ್ಸವ ನಿಮಿತ್ತ ಮಹಾಬಲೇಶ್ವರ ಮಂದಿರದಲ್ಲಿ ಸೋಮವಾರ ಪ್ರಧಾನ ಅರ್ಚಕರು, ಉಪಾಧಿವಂತರು ಮತ್ತು ವೈದಿಕರ ನೇತೃತ್ವದಲ್ಲಿ ಗಣೇಶ ಪೂಜೆ, ಮೃತ್ತಿಕಾ ಹರಣ ಮತ್ತು ಭೂತ ಬಲಿ ನಡೆಯಿತು.
ಈ ಬಾರಿಯ ಶಿವರಾತ್ರಿ ಉತ್ಸವದ ತಾಂತ್ರಿಕ ಪ್ರಧಾನರಾದ ಮಂದಿರದ ಅರ್ಚಕ ವೇ. ಕೃಷ್ಣ ಭಟ್ಟ ಷಡಕ್ಷರಿ ಪಶ್ಚಿಮ ದ್ವಾರದಲ್ಲಿ ವೃಷಭ ಧ್ವಜಾರೋಹಣ ನೆರವೇರಿಸಿ ಉತ್ಸವಕ್ಕೆ ವಿಧ್ಯುಕ್ತವಾಗಿ ನಾಂದಿ ಕೈಗೊಂಡರು. ಆಗಮಿಕ ಕಾರ್ಯದಲ್ಲಿ ಕ್ಷೇತ್ರ ಪುರೋಹಿತ ವೇ. ಮಹಾಬಲ ಉಪಾಧ್ಯಾಯ, ವೇ. ನಾರಾಯಣ ಪಂಡಿತ, ವೇ. ಸಾಂಬ ಭಟ್ಟ ಷಡಕ್ಷರಿ, ವೇ. ಪರಮೇಶ್ವರ ಮಾರ್ಕಾಂಡೆ, ವೇ. ವಿನಾಯಕ ಪ್ರಸಾದ ರಮಣಿ ಇತರರಿದ್ದರು. ಸಂಜೆ ಶ್ರೀದೇವರ ಪಲ್ಲಕ್ಕಿ ಉತ್ಸವ ಜರುಗಿತು. ಉತ್ಸವ ನಿಮಿತ್ತ ಮಂದಿರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಮಂದಿರದಿಂದ ಸಮುದ್ರ ತೀರದಲ್ಲಿ ನಿರ್ವಿುಸಲಾದ ಮಹರ್ಷಿ ದೈವರಾತ ವೇದಿಕೆವರೆಗೆ ಪೆಂಡಾಲ್ ಹಾಕಿ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.
ಸಭೆ: ಉತ್ಸವ ಹಿನ್ನೆಲೆಯಲ್ಲಿ ಮಂದಿರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಸಂಪೂರ್ಣ ವಿವರ ನೀಡಿದರು. 21ರಂದು ಭಕ್ತರಿಗೆ ಶಿವರಾತ್ರಿ ಉಪವಾಸದ ನಿಮಿತ್ತ ಎರಡೂ ಹೊತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಂದಿರದ ಪ್ರವೇಶ ದ್ವಾರದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ತುರ್ತು ಚಿಕಿತ್ಸೆ ಘಟಕ ತೆರೆಯಲಾಗಿದೆ. ಒಂಬತ್ತು ದಿನಗಳ ಉತ್ಸವವನ್ನು ಸಾಂಗವಾಗಿ ನೆರವೇರಿಸಲು ಎಲ್ಲರೂ ಸಹಕರಿಸಬೇಕು ಎಂದು ಶ್ರೀ ರಾಮಚಂದ್ರಾಪುರಮಠ ಮತ್ತು ಮಂದಿರ ಆಡಳಿತ ಮಂಡಳಿ ಪರವಾಗಿ ಹೆಗಡೆ ವಿನಂತಿಸಿದರು. ಮುಖ್ಯ ಅರ್ಚಕ ವೇ. ಶಿತಿಕಂಠ ಹಿರೇ, ಉತ್ಸವ ಸಮಿತಿಯ ಡಾ. ವಿ.ಆರ್. ಮಲ್ಲನ್, ತಾಪಂ ಸದಸ್ಯ ಮಹೇಶ ಶೆಟ್ಟಿ, ಗಣಪತಿ ಭಟ್ಟ ಕೆಕ್ಕಾರ, ಆಡಳಿತ ಮಂಡಳಿಯ ಡಿ.ಡಿ. ಶರ್ಮ, ಜಿ.ವಿ. ಹೆಗಡೆ, ಸಂಯೋಜಕಿ ಡಾ. ಶೀಲಾ ಹೊಸಮನೆ, ಉಪಾಧಿವಂತ ಮಂಡಳ ಸದಸ್ಯರು ಉಪಸ್ಥಿತರಿದ್ದರು.