ಹುಕ್ಕೇರಿ: ಮನುಷ್ಯ ಸಾಧನೆಯ ಬೆನ್ನು ಹತ್ತಿದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ ಎನ್ನುವುದಕ್ಕೆ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಸಾಕ್ಷಿ ಎಂದು ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀ ಹೇಳಿದರು.
ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾವೀರ ನಿಲಜಗಿ ಅವರ 52ನೇ ಜನ್ಮದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಹಕಾರಿ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆಯನ್ನು ಗಮನಿಸಿ ಮಾಧ್ಯಮ ಕ್ಷೇತ್ರ ಸೇರಿ ಹಲವು ಸಂಘ-ಸಂಸ್ಥೆಗಳು, ಮಠಾಧೀಶರಿಂದ ಪ್ರಶಸ್ತಿಗಳ ಸುರಿಮಳೆಯಾಗಿದೆ. ಕಿರಿಯ ವಯಸ್ಸಿನಲ್ಲಿ ಸಮಾಜ ಸೇವೆಯ ಕನಸು ಕಂಡ ಮಹಾವೀರ ನಿಲಜಗಿ ಅದರಲ್ಲಿ ಯಶಸ್ವಿ ಆಗಿದ್ದಾರೆ ಎಂದರು. ಬಡಜನರ ಆರೋಗ್ಯಕ್ಕಾಗಿ ಆಸ್ಪತ್ರೆ ಪ್ರಾರಂಭಿಸುವ ಗುರಿ ಹೊಂದಿದ್ದು, ಮುಂಬರುವ ಜನ್ಮದಿನದಂದು ಆಸ್ಪತ್ರೆ ಪ್ರಾರಂಭಿಸಿ ಬಡ ಮತ್ತು ಮಧ್ಯಮವರ್ಗದವರ ಆಶಾಕಿರಣವಾಗಲಿ ಎಂದು ಹಾರೈಸಿದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶೋಕ ಪಾಟೀಲ ಮಾತನಾಡಿದರು.
ಮಾತೋಶ್ರೀ ವಿಜಯಮಾಲಾ ನಿಲಜಗಿ, ಸೋದರ ಸಂಜಯ ನಿಲಜಗಿ, ಪತ್ನಿ ಪದ್ಮಶ್ರೀ, ಪುತ್ರಿ ಅನುಪಮಾ, ಪುತ್ರ ಪ್ರಜ್ವಲ ನಿಲಜಗಿ, ವಕೀಲರ ಸಂಘದ ಅಧ್ಯಕ್ಷ ರಾಜೀವ ಚೌಗಲಾ, ಉದ್ಯಮಿ ರೋಹಿತ ಚೌಗಲಾ, ಸ್ಥವನಿಧಿ ಸುಕ್ಷೇತ್ರ ಸಂಚಾಲಕ ಬಾಹುಬಲಿ ಸೊಲ್ಲಾಪೂರೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಸಿ.ಪಿ.ಪಾಟೀಲ, ಆರ್.ಟಿ.ಪಾಟೀಲ, ಸಂತೋಷಸಿಂಗ್ ರಜಪೂತ ಇತರರಿದ್ದರು.