ಕಾರವಾರ: ಮಹಾರಾಷ್ಟ್ರದಿಂದ ವಾಪಸಾದ ಮೂವರಿಗೆ ಮಂಗಳವಾರ ಕೋವಿಡ್-19 ದೃಢಪಟ್ಟಿದೆ.
ಭಟ್ಕಳ ಮಾವಳ್ಳಿ ನ್ಯಾಷನಲ್ ಕಾಲನಿಯ 45 ವರ್ಷದ ಪುರುಷ (ಯುಕೆ-145), ಮುರ್ಡೆಶ್ವರದ 18 ವರ್ಷದ ಯುವಕ (ಯುಕೆ-146), ಹಳಿಯಾಳ ಕಲಸಾಪುರದ 31 ವರ್ಷದ ವ್ಯಕ್ತಿ (ಯುಕೆ-147)ಗೆ ಕರೊನಾ ಸೋಂಕು ಖಚಿತವಾಗಿದೆ. ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 147 ಕ್ಕೆ ತಲುಪಿದ್ದು, ಅದರಲ್ಲಿ 112 ಜನ ಗುಣ ಹೊಂದಿದ್ದಾರೆ. 35 ಸಕ್ರಿಯ ಪ್ರಕರಣಗಳಿವೆ.
14 ಖಾಸಗಿ ಆಸ್ಪತ್ರೆಗಳು: ಇದುವರೆಗೆ ಜಿಲ್ಲೆಯಲ್ಲಿ ಕಾರವಾರ ಕ್ರಿಮ್ಸ್ನಲ್ಲಿ ಮಾತ್ರ ಕರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು 14 ಖಾಸಗಿ ಆಸ್ಪತ್ರೆಗಳನ್ನೂ ಕರೊನಾ ಚಿಕಿತ್ಸೆಗಾಗಿ ಗುರುತಿಸಲಾಗಿದೆ. ಯಲ್ಲಾಪುರ, ಕಾರವಾರ, ಭಟ್ಕಳದ ತಲಾ 1, ಶಿರಸಿಯ 2, ಕುಮಟಾದ 5, ಹೊನ್ನಾವರದ 4 ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಅನುಮತಿ ನೀಡಿದೆ.
20 ಸಿಬ್ಬಂದಿ ಗಂಟಲ ದ್ರವ ಪರೀಕ್ಷೆಗೆ: ಯಲ್ಲಾಪುರ ಪಟ್ಟಣದ ಬಸ್ ಘಟಕದ ಬೆಂಗಳೂರು ಬಸ್ನ ನಿರ್ವಾಹಕನೊಬ್ಬನಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಆರೋಗ್ಯ ತಪಾಸಣೆಯನ್ನು ಮಂಗಳವಾರ ನಡೆಸಲಾಯಿತು.
ನಿರ್ವಾಹಕನ ಪ್ರಾಥಮಿಕ ಸಂಪರ್ಕ ಹೊಂದಿದ ಘಟಕದ 20 ಸಿಬ್ಬಂದಿಯ ಗಂಟಲ ದ್ರವ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬರುವವರೆಗೂ ಎಲ್ಲರಿಗೂ ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ. ನಿರ್ವಾಹಕನಿಗೆ ಪಾಸಿಟಿವ್ ಬಂದ ನಂತರ ಘಟಕದಿಂದ ಬಸ್ ಓಡಾಟ ಸ್ಥಗಿತಗೊಂಡಿದೆ. ಮಂಗಳವಾರ ಶಿರಸಿ, ಹುಬ್ಬಳ್ಳಿ, ಕಾರವಾರ ಭಾಗದಿಂದ ಬಸ್ಗಳು ಮಾತ್ರ ಬಂದು ಹೋಗಿದ್ದು ಬಿಟ್ಟರೆ, ಇಲ್ಲಿನ ಘಟಕದಿಂದ ಹೋಗುವ ಯಾವ ಬಸ್ ಸಹ ರಸ್ತೆಗಿಳಿಯಲಿಲ್ಲ. ಬಂದ ಪ್ರಯಾಣಿಕರಿಗೂ ನಿಲ್ದಾಣದಲ್ಲಿದ್ದ ಅಧಿಕಾರಿಗಳು ಕರೊನಾ ಇರುವುದರಿಂದ ಬಸ್ ಬಿಡುವುದಿಲ್ಲವೆಂದು ಹೇಳಿ ಮರಳಿ ಕಳುಹಿಸುತ್ತಿರುವುದು ಕಂಡು ಬಂತು.