ಜಿಲ್ಲೆ

ಮಹಾರಾಷ್ಟ್ರದತ್ತ ಮುಖ ಮಾಡಿದ ಕಬ್ಬು ಬೆಳೆಗಾರರು

ಮಹಾರಾಷ್ಟ್ರದತ್ತ ಮುಖ ಮಾಡಿದ ಕಬ್ಬು ಬೆಳೆಗಾರರು

ಆನಂದ ಭಮ್ಮನ್ನವರ ಚಿಕ್ಕೋಡಿ

ಅತಿವೃಷ್ಟಿ, ಮಳೆ ಹಾನಿ, ಕೀಟ ಬಾಧೆ,ಗೊಬ್ಬರ ಬೆಲೆ ಹೆಚ್ಚಳ, ಕೂಲಿ ಕಾರ್ಮಿಕರ ಸಮಸ್ಯೆ ನಡುವೇಯು ಜಿಲ್ಲೆಯ ರೈತರು ಕಬ್ಬು ಬೆಳೆದು ಒಳ್ಳೆಯ ಆದಾಯದ ನಿರೀಕ್ಷೆಯ ಇಟ್ಟುಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಯ ಮಾಲೀಕರು ಬೆಲೆ ನಿಗದಿ ಪಡಿಸದೆ ಕಾರ್ಖಾನೆ ಆರಂಭಿಸಿದ್ದಾರೆ. ಪರಿಣಾಮ ನೆರೆಯ ಮಹಾರಾಷ್ಟçದ ಕಾರ್ಖಾನೆಗಳು ಹೆಚ್ಚಿನ ಬೆಲೆ ನೀಡುತ್ತಿರುವುದರಿಂದ ಮಹಾ ಕಾರ್ಖಾನೆಗಳತ್ತ ಕಬ್ಬು ಬೆಳೆಗಾರರು ಮುಖ ಮಾಡುತ್ತಿದ್ದಾರೆ.ಇದರಿಂದ ರಾಜ್ಯಕ್ಕೆ ತೆರಿಗೆ ನಷ್ಟವಾಗುತ್ತಿದೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ  ಬೆಳಗಾವಿ. ಆದರೆ ಇಲ್ಲಿನ ರೈತರ ಕಷ್ಟ ಕೇಳವವರೇ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ೩೦ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತವೆ.ರೈತರಿಗೆ ಮಾತ್ರ ಕಬ್ಬು ಬೆಳೆ ಕಹಿಯಾಗುತ್ತಿದೆ. ಕಳೆದ ಮೂರು ವರ್ಷದಿಂದ ಪ್ರತಿ ಟನ್‌ಗೆ ೩ ಸಾವಿರ ಮೇಲೆ ಬೆಲೆ ದಾಟುತ್ತಿಲ್ಲ. ಪರಿಣಾಮ ನೆರೆಯ ಮಹಾರಾಷ್ಟçದ ಕಾರ್ಖಾನೆಗಳಿಗೆ ಜಿಲ್ಲೆಯ ಕಬ್ಬು  ಸಾಗಾಣಿಕೆಯಾಗುತ್ತಿದೆ.

೩೫೦೦ ರೂ.ಬೆಲೆ ಪಾವತಿ:

ಮಹಾರಾಷ್ಟçದಲ್ಲಿ ಕಬ್ಬು ಹಂಗಾಮು ಆರಂಭವಾಗಿದ್ದು, ನ.೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಲಿವೆ. ಕಳೆದ ಬಾರಿ ೩೪೦೦-೩೫೦೦ ವರೆಗೆ ಪ್ರತಿ ಟನ್ ಕಬ್ಬಿಗೆ ಯಾವುದೇ ಸಾಗಾಣಿಕೆ ವೆಚ್ಚ ಪಡೆಯದೆ ಕಾರ್ಖಾನೆಗಳು ಹಣ ಪಾವತಿವೆ. ನಮ್ಮ ರಾಜ್ಯದಲ್ಲಿ ೩೦೫೦ ಗರಿಷ್ಠ ಬೆಲೆ ನೀಡಲಾಗಿದೆ. ಪ್ರತಿ ಟನ್‌ಗೆ ೪೦೦ ರಿಂದ ೫೦೦ ಹೆಚ್ಚುವರಿಯಾಗಿ ದೊರೆಯುತ್ತಿರುವುದರಿಂದ ಅನಿವಾರ್ಯವಾಗಿ ಕಬ್ಬು ಬೆಳೆಗಾರರು ಮಹಾರಾಷ್ಟçದತ್ತ ಮುಖ ಮಾಡುತ್ತಿದ್ದಾರೆ.

೨೫ಸಾವಿರ ರೈತರಿಂದ ಸಾಗಾಣಿಕೆ:

ಜಿಲ್ಲೆಯಲ್ಲಿ ೩೦ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸಿದರು ಬೆಲೆ ನಿಗದಿ ಮತ್ತು ಬೆಲೆ ಹೆಚ್ಚಳ ಮಾಡದ ಪರಿಣಾಮ ನೆರೆಯ ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಹೆಮರಸ್, ಹರಳಿ, ಹಮೀದ್‌ವಾಡಿ,ಶಾಹು ಕಾರ್ಖಾನೆ,ದತ್ತ, ಗುರು ದತ್ತ, ಪಂಚ ಗಂಗಾ ಸೇರಿದಂತೆ ಹತ್ತಕ್ಕೂ ಅಧಿಕ ಕಾರ್ಖಾನೆಗಳಿಗೆ ರಾಜ್ಯದ ೨೫ ಸಾವಿರಕ್ಕೂ ಅಧಿಕ ಸದಸ್ಯರಿಂದ ಪ್ರತಿ ಹಂಗಾಮಿನಲ್ಲಿ ೧೦ ಲಕ್ಷಕ್ಕೂ ಅಧಿಕ ಟನ್ ಕಬ್ಬು ಪೂರೈಕೆಯಾಗುವ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ನಷ್ಟವಾಗುತ್ತಿದೆ.

೩೫೫೦ ಎಫ್‌ಆರ್‌ಪಿ ನಿಗದಿ:

ಪ್ರಸ್ತುತ ವರ್ಷ ಟನ್ ಕಬ್ಬಿಗೆ ೩೫೫೦ ಪಾವತಿಸಬೇಕೆಂದು ಕೇಂದ್ರ ಸರ್ಕಾರ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) ನಿಗದಿ ಮಾಡಿದೆ. ಪ್ರತಿ ಟನ್ ಕಬ್ಬಿಗೆ ೧೦.೨೫% ಇಳುವರಿ ದರವನ್ನು ಆಧರಿಸಿ ೩೫೫೦ ನೀಡಬೇಕೆಂದು ಕೇಂದ್ರ ಸರ್ಕಾರದ ಸ್ಪಷ್ಟ ನಿರ್ದೇಶನ ನೀಡಿದೆ.ಆದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಸೂಚನೆಗೆ ಕ್ಯಾರೆ ಎನ್ನದೆ ಬೆಲೆ ನಿಗದಿ ಮಾಡದೆ ಕಬ್ಬು  ಹಂಗಾಮು ಆರಂಭಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

-----

ರಾಜ್ಯದ ಕಬ್ಬು ಮಹಾರಾಷ್ಟçದ ಕಾರ್ಖಾನೆಗಳಿಗೆ ಪೂರೈಕೆಯಾಗುವುದರಿಂದ ರಾಜ್ಯಕ್ಕೆ  ತೆರಿಗೆ ನಷ್ಟವಾಗುತ್ತದೆ. ಸರ್ಕಾರ ಯಾವುದೇ ಲಾಭಿಗೆ ಮಣಿಯದೆ, ಕಾರ್ಖಾನೆಗಳಿಗೆ ಮೂಗುದಾರ ಹಾಕಬೇಕು. ಹಾಗೂ ಮಹಾರಾಷ್ಟç ಮಾದರಿಯಲ್ಲಿ ಕಬ್ಬಿನ ಬೆಲೆ ನಿಗದಿ ಪಡಿಸಬೇಕು. ಕಬ್ಬು ಪೂರೈಸಿದ ೧೫ ದಿನಗಳೊಳಗಾಗಿ ಬಿಲ್ ಪಾವತಿಸಬೇಕು.

ಚೂನಪ್ಪ ಪೂಜೇರಿ

ಕರ್ನಾಟಕ ರೈತ ಸಂಘದ ರಾಜ್ಯಾದ್ಯಕ್ಷ