ಜಿಲ್ಲೆ

ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಲಿ

ಹುಬ್ಬಳ್ಳಿ : ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಜನ ವರದಿ ಒಪ್ಪದ ಮಹಾರಾಷ್ಟ್ರ ಸರ್ಕಾರ ಮೇಲಿಂದ ಮೇಲೆ ಕಿರಿಕಿರಿ ಮಾಡುತ್ತಲೇ ಬಂದಿದೆ. ಇದೀಗ ಕರ್ನಾಟಕದ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ವಾದಿಸುತ್ತ, ಆ ಹಳ್ಳಿಗಳಲ್ಲಿ ತನ್ನ ಸರ್ಕಾರದ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.

‘ಮಹಾತ್ಮಾ ಜೋತಿಬಾ ಜನ ಆರೋಗ್ಯ ಯೋಜನೆ’ ಎಂಬ ಯೋಜನೆಯನ್ನು ಕರ್ನಾಟಕದ 865 ಹಳ್ಳಿಗಳಲ್ಲಿ ಜಾರಿಗೊಳಿಸಲು ಮುಂದಾಗಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಲಿ ಅಥವಾ ಇತರ ಸಚಿವರಾಗಲಿ ಚಕಾರ ಎತ್ತದೇ ಮೌನ ತಾಳಿದ್ದಾರೆ. ಕೇಂದ್ರ ಸರ್ಕಾರವೂ ಮೌನ ವಹಿಸಿದೆ ಎಂದು ದೂರಿದರು.

ಮಹಾರಾಷ್ಟ್ರ ಸರ್ಕಾರದ ಈ ನಡೆ ಕನ್ನಡ ಜಲ, ನೆಲ, ಭಾಷೆಯ ಸಾರ್ವಭೌಮತೆಗೆ ಸವಾಲಾಗಿದೆ. ಮಹಾರಾಷ್ಟ್ರದಲ್ಲಿಯೂ ಕನ್ನಡಿಗರು ಇದ್ದಾರೆ. ಅಲ್ಲಿನ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರ ಸರಿಯಾದ ಸೌಲಭ್ಯ ನೀಡುತ್ತಿಲ್ಲವೆಂದು ಕರ್ನಾಟಕ ಸರ್ಕಾರ ಸೌಲಭ್ಯ ನೀಡಲು ಹೋದರೆ ಅಲ್ಲಿನವರು ಸುಮ್ಮನೆ ಇರುವರೇ ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರದ ನಡೆ ಅಪಾಯಕಾರಿಯಾಗಿದ್ದು, ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು. ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.