ಚಿತ್ರದುರ್ಗ: ರಾಜ್ಯದ ನೆಲ, ಜಲ ಮತ್ತು ಭಾಷೆ ರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಏಕೀಕರಣವಾಗಿ 68 ವರ್ಷಗಳಾಗಿದ್ದರೂ, ಕರಾಳ ದಿನಾಚರಣೆಗೆ ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ನಡೆ ಖಂಡನೀಯ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಅಭದ್ರತೆ ಮೂಡಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ, ಕಾಂಗ್ರೆಸ್ ಸರ್ಕಾರ ಮಧ್ಯದಲ್ಲೇ ಅಧಿಕಾರ ಕಳೆದುಕೊಂಡಿರುವ ಇತಿಹಾಸವಿಲ್ಲ ಎಂದು ಸುಧಾಕರ್ ಹೇಳಿದರು. ಸಿದ್ದರಾಮಯ್ಯ ಬಣ ಎಂಬುದು ಸಚಿವ ಜಮೀರ್ ಅಹಮದ್‌ಖಾನ್ ಅವರ ವೈಯುಕ್ತಿಕ ಹೇಳಿಕೆ. ನಾನು ಯಾವ ಬಣದವನೆಂದು ನಿಮಗೆ ಯಾಕೆ ಹೇಳಬೇಕೆಂದು ಸುದ್ದಿಗಾರರನ್ನು ಪ್ರಶ್ನಿಸಿದ ಸಚಿವರು, ಅಧಿಕಾರ ಹಂಚಿಕೆ ಸೂತ್ರದ ವಿಚಾರ ಏನಿದ್ದರೂ ಸಿಎಂ, ಡಿಸಿಎಂ ಹಾಗೂ ವರಿಷ್ಠರಿಗೆ ಗೊತ್ತಿರುತ್ತದೆ ಎಂದರು.
ನಮ್ಮ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕರು ಯಾರ (ಬಿಜೆಪಿ) ಸಂಪರ್ಕದಲ್ಲೂ ಇಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
*ರೂ. 5300 ಕೋಟಿ ಬಿಡುಗಡೆ ಮಾಡಿಸಲಿ
ಅಧಿಕಾರಿಗಳು, ಸಚಿವರು ಗುತ್ತಿಗೆದಾರರ ಬಳಿ ಕಮಿಷನ್‌ಗೆ ಕೇಳುತ್ತಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗಿದೆ ಎಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಆರೋಪ ಸುಳ್ಳು ಎಂದು ಡಿ.ಸುಧಾಕರ್ ಹೇಳಿದರು.
ನಾರಾಯಣಸ್ವಾಮಿ ನನ್ನ ಸ್ನೇಹಿತರು. ನಾನು ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ನಮ್ಮ ಸರ್ಕಾರದಲ್ಲಿ ಯಾರೂ ಕಮಿಷನ್ ಕೇಳುತ್ತಿಲ್ಲ ಎಂದು ಹೇಳಿದ ಅವರು, ವಾಗ್ದಾನ ನೀಡಿರುವಂತೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನಾರಾಯಣಸ್ವಾಮಿ ಅವರು ಮೊದಲು ಬಿಡುಗಡೆ ಮಾಡಿಸಲಿ.
ಮುಂದಿನ ತಿಂಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಮಗಾರಿ ಪರಿಶೀಲನೆ ನಡೆಸಲಿದ್ದು,ಯೋಜನಾ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಶಾಸಕರ,ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ.
ಈ ಯೋಜನೆ ಕಾಮಗಾರಿ ಒಂದು ಸಾವಿರ ಕೋಟಿ ರೂ. ಬಿಲ್ ಪೆಂಡಿಂಗ್ ಇಟ್ಟಿರುವುದು ಹಿಂದಿನ ಬಿಜೆಪಿ ಸರ್ಕಾರ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಮಾತಿಗೆ ನಾವು ಬದ್ಧ. ಅಲ್ಲದೆ ತರಾತುರಿಯಲ್ಲಿ, ಕಡಿಮೆ ಅನುದಾನವಿಟ್ಟು, 2. 27 ಲಕ್ಷ ಕೋಟಿ ರೂ. ವೆಚ್ಚದ ಹಲವು ಕಾಮಗಾರಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
===