ಮೈಸೂರು: ರಾಜ್ಯದಲ್ಲಿ ‘ಹೆಣ್ಣು ಮಕ್ಕಳ ಶಿಕ್ಷಣ’ದಲ್ಲಿ ಕ್ರಾಂತಿಗೆ ನಾಂದಿ ಹಾಡಿದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದಿದೆ. ಪ್ರಾಂಶುಪಾಲರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ನೂರು ವರ್ಷಕ್ಕಿಂತ ಪುರಾತನವಾದ ಪಾರಂಪರಿಕ ಕಟ್ಟಡದ ಕುಸಿದ ಭಾಗವು ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಕೊಠಡಿಯಾಗಿದೆ. ಈ ಕಟ್ಟಡ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈಗ ಪೂರ್ಣ ನೆಲಸಮಗೊಂಡಿದೆ.
2 ದಿನ ರಜೆ: ಕಳೆದ ಒಂದು ವಾರದಿಂದ ನಗರದಲ್ಲಿ ಸತತ ಮಳೆ ಸುರಿಯುತ್ತಿದೆ. ಇದರಿಂದ ಶಿಥಿಲಗೊಂಡ ಕಟ್ಟಡದ ಒಂದು ಭಾಗ ಧರೆಗುರುಳಿದೆ. ಘಟನೆ ಬಳಿಕ ಕಾಲೇಜಿಗೆ 2 ದಿನಗಳು ರಜೆ ಘೋಷಿಸಲಾಗಿದೆ.
ಒಳಗೆ ಹೋಗದಂತೆ ಮುನ್ನೆಚ್ಚರಿಕೆ:
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಅವರು ಎಂದಿನಂತೆ ಕೊಠಡಿಗೆ ಆಗಮಿಸಿದ ವೇಳೆ ಗೋಡೆಯಲ್ಲಿ ಬಿರುಕು ಮೂಡಿರುವುದನ್ನು ಗಮನಿಸಿ, ಪ್ರಾಂಶುಪಾಲ ಡಾ.ಡಿ.ರವಿ ಗಮನಕ್ಕೆ ಬಂದರು. ಕೂಡಲೇ ಕೊಠಡಿ ಪರಿಶೀಲಿಸಿದ ಪ್ರಾಂಶುಪಾಲರು ಬೆಳಗ್ಗೆ 10.28ರಲ್ಲಿ ಬಾಗಿಲು ಮುಚ್ಚಿಸಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಯಾರೂ ಒಳಗೆ ಪ್ರವೇಶಿಸದಂತೆ ಸೂಚಿಸಿದರು. ಕಟ್ಟಡದ ಮೊದಲ ಮಹಡಿಯ ಮೆಟ್ಟಿಲು ಇಳಿಯುತ್ತಿದ್ದಂತೆಯೇ ಭಾರಿ ಶಬ್ದದೊಂದಿಗೆ 10.35 ಸುಮಾರಿಗೆ ಕಟ್ಟಡ ಕುಸಿಯಿತು ಎಂದು ಕೆ.ಕೆ.ಪದ್ಮನಾಭ ಘಟನೆಯನ್ನು ವಿವರಿಸಿದರು.
ಕನಿಷ್ಠ 35 ಜನರು ಇರುತ್ತಿದ್ದರು:
ಕುಸಿದ ಕೊಠಡಿಯ ಪ್ರಯೋಗಾಲಯದಲ್ಲಿ 30 ವಿದ್ಯಾರ್ಥಿನಿಯರು, ಐವರು ಉಪನ್ಯಾಸಕರು ಸದಾ ಇರುತ್ತಿದ್ದರು. ಆಕಸ್ಮಾತ್ ಇವರೆಲ್ಲ ಅಲ್ಲಿದ್ದರೆ ಜೀವಹಾನಿಯಾಗುತ್ತಿತ್ತು. ಮುನ್ನೆಚ್ಚರಿಕೆ ವಹಿಸಿ ಲ್ಯಾಬ್‌ನಿಂದ ವಿದ್ಯಾರ್ಥಿನಿಯರನ್ನು ಹೊರ ಕಳುಹಿಸಿ, ಕೊಠಡಿಗೆ ಬೀಗ ಹಾಕಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ವಿಷಯದಲ್ಲಿ ಪ್ರಾಂಶುಪಾಲರ ಸಮಯ ಪ್ರಜ್ಞೆ ಮೆರೆದಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.
ದುರಸ್ತಿಗೆ ಮುನ್ನವೇ ಕುಸಿತ
ಕುಸಿದ ಕಟ್ಟಡಕ್ಕೆ 106 ವರ್ಷವಾಗಿದೆ. ಬಹಳಷ್ಟು ಶಿಥಿಲಗೊಂಡಿದೆ. ಹೀಗಾಗಿ, ಪಾರಂಪರಿಕ ಕಟ್ಟಡದ ದುರಸ್ತಿ ಕಾಮಗಾರಿಗೆ ಭೂಮಿಪೂಜೆಯನ್ನು ಅ.22ರಂದು ಹಮ್ಮಿಕೊಳ್ಳಲಾಗಿತ್ತು. ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಬಿರುಕುಗಳು ಹೆಚ್ಚಾಗಿದ್ದವು. ದುರಸ್ತಿಗೆ ಒಂದು ದಿನ ಮುನ್ನವೇ ಕಟ್ಟಡ ಕುಸಿದಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದರು.
40 ಲಕ್ಷ ರೂ. ಉಪಕರಣ ನಷ್ಟ
ಲ್ಯಾಬ್‌ನ ಕೊಠಡಿ ಕುಸಿದಿರುವುದರಿಂದ ಅಂದಾಜು 40 ಲಕ್ಷ ರೂ. ಮೌಲ್ಯದ ಉಪಕರಣಗಳು ಪೂರ್ಣ ಹಾಳಾಗಿವೆ. ಅವುಗಳೆಲ್ಲ ಕಟ್ಟಡದ ಅವಶೇಷಗಳ ಅಡಿಯಲ್ಲೇ ಸಿಲುಕಿಕೊಂಡಿವೆ. ಪ್ರಯೋಗಾಲಯ ಪ್ರಾರಂಭಿಸುವಾಗ ಹೊಸ ಉಪಕರಣ ಖರೀದಿಸಬೇಕಾಗುತ್ತದೆ.
ಸೋರುತ್ತದೆ ಕಟ್ಟಡದ ಮಾಳಿಗೆ:
ಕುಸಿದ ಕೊಠಡಿಯ ಪಕ್ಕದ ಕೊಠಡಿಯಲ್ಲಿದ್ದ ಪ್ರಾಣಿಶಾಸ್ತ್ರ ವಿಭಾಗದ ಡಾ.ಲತಾ ಅವರು, ‘ಜೋರು ಶಬ್ದ ಬಂದಿತು. ಹೊರಗೆ ಓಡಿ ಬಂದು ನೋಡುವಷ್ಟರಲ್ಲಿ ಕಟ್ಟಡ ಕುಸಿದಿತ್ತು’ ಎಂದು ಆತಂಕದಿಂದ ನುಡಿದರು. ‘ನಮ್ಮ ವಿಭಾಗದ ಕೊಠಡಿಯಲ್ಲಿ ಮಳೆ ಬಂದಾಗ ನಲ್ಲಿಯಲ್ಲಿ ಬರುವಂತೆ ನೀರು ಸೋರುತ್ತದೆ. ದಿನಕ್ಕೆ ನಾಲ್ಕು ಬಕೆಟ್ ಸುರಿಯುತ್ತಿದ್ದೇವೆ’ ಎಂದೂ ತಿಳಿಸಿದರು.
ಉಳಿದ ಭಾಗವೂ ಶಿಥಿಲ: ಕುಸಿದ ಕಟ್ಟಡದ ಎರಡು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಶಿಥಿಲಗೊಂಡಿರುವ ಕಟ್ಟಡದಲ್ಲಿಯೇ 15 ಲ್ಯಾಬ್‌ಗಳಿವೆ. ಅವುಗಳ ಸ್ಥಿತಿಯೂ ಭಿನ್ನವಾಗಿಲ್ಲ ಎಂದು ಸಸ್ಯಶಾಸ್ತ್ರ ವಿಭಾಗದ ಡಾ.ಶಿವಲಿಂಗಯ್ಯ ತಿಳಿಸಿದರು.
ಶಾಸಕರಿಂದ ಪರಿಶೀಲನೆ
ಕಟ್ಟಡ ಕುಸಿದ ವಿಷಯ ತಿಳಿದು ತಕ್ಷಣಕ್ಕೆ ಬಂದ ಶಾಸಕ ಎಲ್.ನಾಗೇಂದ್ರ ಪರಿಶೀಲನೆ ನಡೆಸಿದರು. ದುರಸ್ತಿ ಕಾರ್ಯಕ್ಕೆ 2 ಕೋಟಿ ರೂ. ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಬೇಕಿತ್ತು. ಈಗ ಕಟ್ಟಡ ಪೂರ್ಣ ಕುಸಿದಿದೆ. ಅದೃಷ್ಟಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ನುಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಬಗ್ಗೆ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿತ್ತು. ಮುಖ್ಯಮಂತ್ರಿ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು. ದುರಸ್ತಿ ಕಾರ್ಯ ಆರಂಭಿಸುವ ಮುನ್ನವೇ ಪೂರ್ಣ ಕುಸಿದಿದೆ ಎಂದರು.
ಪಾರಂಪರಿಕ ಕಟ್ಟಡಗಳಿಗೆ ಆಪತ್ತು
ಮೂರು ದಿನಗಳ ಹಿಂದೆಯಷ್ಟೇ ಅರಮನೆಯ ಕೋಟೆ ಗೋಡೆ ಕುಸಿದಿತ್ತು. ವರಾಹ ದ್ವಾರ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿರುವ ಕುಸಿದ ಭಾಗವು, ಕೋಟೆಯ ಆಗ್ನೇಯ ಮೂಲೆಯಲ್ಲಿದೆ. 20 ಮೀಟರ್ ಅಗಲ ಹಾಗೂ 7 ಮೀಟರ್ ಎತ್ತರದ ಗೋಡೆ ಕುಸಿದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪಾರಂಪರಿಕ ಕಟ್ಟಡ ಕುಸಿದಿದೆ.
ನಗರದಲ್ಲಿರುವ ಬಹುತೇಕ ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿ ಇವೆ. ಸತತ ಮಳೆಯಿಂದ ಅವುಗಳಿಗೂ ಆಪತ್ತು ಬರುವ ಸಾಧ್ಯತೆಯಿದ್ದು, ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿಗೆ ತಕ್ಷಣಕ್ಕೆ ಕ್ರಮ ವಹಿಸಬೇಕಾಗಿದೆ. ಇಲ್ಲವಾದರೆ ಒಂದೊಂದೇ ಕಟ್ಟಡಗಳು ಧರೆಗುರುಳಲಿವೆ.
ಶಿಥಿಲಗೊಂಡಿದ್ದ ಕಟ್ಟಡ ಕುಸಿದಿದೆ. ಅದೃಷ್ಟಕ್ಕೆ ಯಾವುದೇ ಜೀವಹಾನಿಯಾಗಿಲ್ಲ. ಪಾಲಕರು ಆತಂಕಪಡುವ ಅಗತ್ಯವಿಲ್ಲ. ಮುಂಜಾಗ್ರತೆಯಾಗಿ 2 ದಿನ ರಜೆ ನೀಡಲಾಗಿದೆ. ಈಗಾಗಲೇ ನಿರ್ಮಾಣಗೊಂಡಿರುವ ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯಲಿವೆ.ಡಾ.ಡಿ.ರವಿ, ಪ್ರಾಂಶುಪಾಲ, ಮಹಾರಾಣಿ ವಿಜ್ಞಾನ ಕಾಲೇಜು.