ಜಿಲ್ಲೆ

ಮಹಾರಾಜ ಪಾರ್ಕ್‌ನಲ್ಲಿ ಕ್ರೀಡಾಗೆ ಹೊಸ ಕಟ್ಟಡ ನಿರ್ಮಾಣ

ಹಾಸನ: ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿರುವ ಕ್ರೀಡಾ ಉತ್ಸಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾರಾಜ ಪಾರ್ಕ್‌ನಲ್ಲಿ ಕ್ರೀಡಾ ಚಟುವಟಿಕೆಗಳಿಗಾಗಿ ಒಂದು ವರ್ಷದ ಒಳಗಾಗಿ ಮತ್ತೊಂದು ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು.
ನಗರದ ಮಹಾರಾಜ ಪಾರ್ಕ್‌ನಲ್ಲಿ ಶುಕ್ರವಾರ ಜಿಲ್ಲಾ ಅಮೆಚೂರ್ ಬಾಡಿ ಬಿಲ್ದರ್ಸ್ ಸಂಸ್ಥೆ, ಜಿಲ್ಲಾ ಕ್ರೀಡಾ ಪರಿಷತ್, ಜಿಲ್ಲಾ ಯೋಗ ಸಂಸ್ಥೆ, ಜಿಲ್ಲಾ ಪಂಜ ಕುಸ್ತಿ ಸಂಸ್ಥೆ, ಜಿಲ್ಲಾ ವೆಟ್ಟ್ ಲಿಫ್ಟರ್ಸ್ ಸಂಸ್ಥೆ, ರಾಜ್ಯ ಗ್ರಾಮೀಣ ಕ್ರೀಡೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಆಯುಧಪೂಜೆ ಹಾಗೂ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಜಿಲ್ಲೆ ಕುಸ್ತಿಗೆ ಹೆಸರುವಾಸಿಯಾಗಿತ್ತು.ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದೆ. ಅಲ್ಲದೆ ಇಂತಹ ಅದೆಷ್ಟೋ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳು ಮರೆಯಾಗಿವೆ. ಅವುಗಳಿಗೆ ಮತ್ತೆ ಜೀವ ತುಂಬುವ ಅಗತ್ಯವಿದೆ. ಇಲ್ಲಿ ನಡೆದ ಮಲ್ಲಕಂಬ ಪ್ರದರ್ಶನ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ. ಇಂತಹ ಕ್ರೀಡೆಗಳಲ್ಲಿ ಎಲ್ಲರೂ ಆಸಕ್ತಿ ಬಹಿಸುವ ಅಗತ್ಯವಿದೆ ಎಂದರು.
ತಮ್ಮ ತಂದೆ ದಿ.ಎಚ್.ಎಸ್ ಪ್ರಕಾಶ್ ಹಾಗೂ ದಿವಂಗತ ಡಾ. ಮುನಿ ವೆಂಕತಟೇಗೌಡ ಅವರು ಕೂಡ ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಅವರ ಸ್ಮರಣಾಥರ್ವಾಗಿ ಇಂದಿಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಹೆಚ್ಚು ಹೆಚ್ಚು ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಕೆಲಸಗಳನ್ನು ಮಾಡಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ನನಗೆ ಸನ್ಮಾನ ಮಾಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ, ಜೊತೆಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಆಗಿದೆ, ಪಾರ್ಕ್‌ನಲ್ಲಿ ಕ್ರೀಡಾಪಟ್ಟುಗಳಿಗೆ ಇನ್ನೊಂದು ಕಟ್ಟಡ ಹಾಗೂ ಶೌಚಾಲಯ ನಿರ್ಮಾಣದ ಬಗ್ಗೆ ಶಾಸಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷೆ ಲತಾ ಸುರೇಶ್, ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೀಲು ಮತ್ತು ಮೂಳೆ ತಜ್ಞ ಡಾ. ವಸಂತ್ ಮಾಧವ್, ಕಾಮನ್ವೆಲ್ತ್ ಕ್ರೀಡಾಪಟು ಸಂತೋಷ್ ಶೆಟ್ಟಿ, ಮಾಜಿ ನಗರಸಭೆ ಸದಸ್ಯ ಗೋಪಾಲ್, ಹಿರಿಯ ಕ್ರೀಡಾಪಟು ಗಿರೀಗೌಡ, ಆಂಥೋನಿ, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ಕ್ರೀಡಾ ಪರಿಷತ್ ಕಾರ್ಯದರ್ಶಿ ಕೈಲಾಸನ್, ಮೋಹನ್, ಅನುಮಂತೇಗೌಡ, ಭಾನುಮತಿ, ಸತೀಶ್ ಗೋಪಾಲ್, ರವಿ ಶಂಕರ್, ಹಸೀನಾ, ಆಶಾ ಕ್ರೀಡಾ ತರಬೇತುದಾರ ಮಹದೇವ್ ಇತರರು ಇದ್ದರು.