ಹಳಿಯಾಳ: ತಾಲೂಕಿನ ನಿರಲಗಾ ಗ್ರಾಮದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಗ್ರಾಮಸ್ಥರು ಗ್ರಾಮದೇವಿಗೆ ಮೊರೆ ಹೋಗಿದ್ದಾರೆ.
ಗ್ರಾಮದ ಅಗಸಿ ಬಾಗಿಲಲ್ಲಿರುವ ಮರಕ್ಕೆ ಸಾರ್ವಜನಿಕ ಎಚ್ಚರಿಕೆಯ ನೊಟೀಸ್ ತೂಗು ಹಾಕಿ ಹೊರಗಿನವರು ಯಾರೂ ಗ್ರಾಮದಲ್ಲಿ ಕಾಲಿರಿಸದಂತೆ ಮನವಿ ಮಾಡಲಾಗಿದೆ.
ಕರೊನಾ ವೈರಸ್ ಹರಡದಂತೆ ಈ ಮೊದಲೇ ಗ್ರಾಮದ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆದರೆ, ಯುವಪೀಳಿಗೆಯನ್ನು ಹದ್ದು ಬಸ್ತಿನಲ್ಲಿಡಲು ಕಷ್ಟ ಸಾಧ್ಯವಾಗಿದ್ದರಿಂದ ಗ್ರಾಮಸ್ಥರು ಕರೊನಾ ನಿಯಂತ್ರಣಕ್ಕಾಗಿ ಗ್ರಾಮದೇವಿಗೆ ಮೊರೆ ಹೋಗಿದ್ದಾರೆ.
ಮಾರ್ಚ್ 31 ರಿಂದ ಏ.14ರವರೆಗೆ ಗ್ರಾಮದಲ್ಲಿ ದೇವಿಯ ವಾರ ಎಂದು ಘೊಷಣೆಯಾಗಿದೆ.
ಎಲ್ಲ ಬಂದ್: ದೇವಿಯ ವ್ರತಾಚರಣೆ ಸಮಯದಲ್ಲಿ ಯಾರು ಹೊಲಕ್ಕೆ ಹೋಗಲ್ಲ. ಕೃಷಿ ಕಾಯಕ ಮಾಡುವಂತಿಲ್ಲ. ಇನ್ನಾವುದೇ ಚಟುವಟಿಕೆಗೆ ಅವಕಾಶ ನೀಡುವಂತಿಲ್ಲ. ಮನೆಗೆ ಒಳಗಿನಿಂದ ಬೀಗ ಹಾಕಿ ಕುಟುಂಬದ ಸದಸ್ಯರೆಲ್ಲ ಮನೆಯೊಳಗೆ ಇರಬೇಕು. ದೇವಿಯ ವಾರದ ದಿನ ಒಲೆಯ ಮೇಲೆ ಕಾವಲಿ ಇಡುವಂತಿಲ್ಲ. ರೊಟ್ಟಿ ಚಪಾತಿ ಮಾಡುವಂತಿಲ್ಲ. ಹೊರ ಭಾಗದ ಜನ ಗ್ರಾಮಕ್ಕೆ ಕಾಲಿಡುವಂತಿಲ್ಲ, ಗ್ರಾಮಸ್ಥರು ಹೊರ ಹೊಗುವಂತಿಲ್ಲ ಎಂದು ಡಂಗುರ ಸಾರಲಾಗಿದೆ.
ಪಟ್ಟಣದಲ್ಲಿ ಸಂಚಾರ ವಿರಳ: ಬುಧವಾರ ಬೆಳಗಿನ ಜಾವ ಅಂಗಡಿ ತೆರೆದು ವಹಿವಾಟು ನಡೆಸುತ್ತಿರುವ ವರ್ತಕರಿಗೆ ಲಾಕ್ ಡೌನ್ ಅರ್ಥವನ್ನು ಮನದಟ್ಟು ಮಾಡಿ ಅಂಗಡಿಯನ್ನು ಮುಚ್ಚಿಸಲಾಯಿತು. ಪಟ್ಟಣದಲ್ಲಿ ಪೊಲೀಸರ ಗಸ್ತು ಎಂದಿಗಿಂತ ಹೆಚ್ಚಾಗಿದ್ದರಿಂದ ಜನ ರಸ್ತೆಗಿಳಿಯುವ ಸಾಹಸ ಮಾಡಲಿಲ್ಲ.