ಚಿಕ್ಕೋಡಿ: ತಾಲೂಕಿನ ಕೋಥಳಿ ಗ್ರಾಮದ ಶಾಂತಿಗಿರಿ ಆಶ್ರಮದಲ್ಲಿ ಮೇ ೨೭ರಂದು ಮಹಾಮಸ್ತಕಾಭಿಷೇಕ ಮತ್ತು ಆಚಾರ್ಯದ್ವಯರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಮಿಟಿ ಸದಸ್ಯ ಕಿರಣ ಪಾಟೀಲ ತಿಳಿಸಿದರು.
ತಾಲೂಕಿನ ಕೋಥಳಿ ಗ್ರಾಮದ ಶಾಂತಿಗಿರಿ ಆಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೭ರಂದು ಬೆಳಗ್ಗೆ ೬.೩೦ ಗಂಟೆಗೆ ಧ್ವಜಾರೋಹಣ, ೮ ಗಂಟೆಗೆ ಅಭಿಷೇಕ ಬಳಿಕ ಜೈನ ಮಂದಿರದಿಂದ ಶಾಂತಿಗಿರಿವರೆಗೆ ಶೋಭಾ ಯಾತ್ರೆ ಜರುಗಲಿದೆ. ೯ರಿಂದ ಪಾದುಕೆಗೆ ಅಭಿಷೇಕ, ೧೧ರಿಂದ ೧೦೦೮ ಶಾಂತಿನಾಥ ವಿಧಾನ, ೨ ಗಂಟೆಗೆ ವಿನಯಾಂಜಲಿ ಸಭೆ, ಸಂಜೆ ೪ ಗಂಟೆಗೆ ಮಹಾಮಸ್ತಕಾಭಿಷೇಕ ಜರುಗಲಿದೆ.
ಶಾಂತಿಸೇನ ಮುನಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸಚಿವ ಡಿ.ಸುಧಾಕರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಶಾಸಕ ಗಣೇಶ ಹುಕ್ಕೇರಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಧನ್ಯಕುಮಾರ ಗುಂಡೆ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅಜಿತ್ ಮುರಗುಂಡೆ, ವಿನೋದ ದೊಡ್ಡನ್ನವರ, ಜಯಕುಮಾರ ಉಪಾಧ್ಯೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಂತಿಸೇನ ಮುನಿ ಮಹಾರಾಜರು, ಟ್ರಸ್ಟ್ ಕಮಿಟಿಯ ಮನೋಹರ ದೊಡ್ಡನ್ನವರ, ಬಾಹುಬಲಿ ಖೋತ, ಪಾಯಗೌಡ ಖೋತ ಇತರರು ಇದ್ದರು.