ಜಿಲ್ಲೆ

ಮಹಾಮಳೆ ಆರ್ಭಟ: ಸಾರ್ವಜನಿಕ ಆಸ್ತಿ- ಪಾಸ್ತಿ ಅಪಾರ ಹಾನಿ


ಅರಕಲಗೂಡು: ತಾಲೂಕಿನಲ್ಲಿ ಶನಿವಾರ ರಾತ್ರಿ ಮಹಾಮಳೆ ಆರ್ಭಟಕ್ಕೆ ಹಲವಾರು ನಾಲೆಗಳು, ಕೆರೆ- ಕಟ್ಟೆಗಳು ತುಂಬಿ ಹರಿದು ಕೃಷಿ ಜಮೀನು ಮೇಲೆ ನುಗ್ಗಿ ಸಾರ್ವಜನಿಕ ಆಸ್ತಿ- ಪಾಸ್ತಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ರೈತರು ತತ್ತರಿಸಿದ್ದಾರೆ.


ದುಮ್ಮಿ- ಮಲ್ಲಾಪುರ ಕೆರೆ ಮತ್ತೊಮ್ಮೆ ಉಕ್ಕಿ ಹರಿದು ರಸ್ತೆ ಕೊಚ್ಚಿ ಹೋಗಿ ಕೃಷಿ ಜಮೀನು ಮೇಲೆ ಸಾಗರದಂತೆ ನೀರು ನುಗ್ಗುತ್ತಿದೆ. ಕೆರೆ ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ವಾಲಿವೆ.


ಮಲ್ಲಾಪುರ ಮೇಲ್ಭಾಗದಿಂದ ಹಲವಾರು ಕೆರೆಗಳ ನೀರು ಈ ಕೆರೆಗೆ ನುಗ್ಗುತ್ತಿದ್ದು ಉಕ್ಕೇರಿ ಭೋರ್ಗರೆದು ನುಗ್ಗುತ್ತಿದೆ. ಪರಿಣಾಮವಾಗಿ ಸಂತೆಮರೂರು, ಇಲ್ಲಹಳ್ಳಿ, ದುಮ್ಮಿಕೊಪ್ಪಲು, ಜೋಡಿ ಗುಬ್ಬಿ ಮಾರ್ಗದ ರಸ್ತೆ ಜಲಾವೃತಾಗಿ ಸಂಚಾರಕ್ಕೆ ಅಡಚಣೆಯಾಗಿದೆ.


ಕಳೆದ ಎರಡು ತಿಂಗಳ ಹಿಂದೆ ಕೆರೆ ಕೋಡಿ ಬಿದ್ದು ಗುಬ್ಬಿ ಮಾರ್ಗದ ರಸ್ತೆ ಅರ್ಧಭಾಗ ತುಂಡಾಗಿತ್ತು. ಅಧಿಕಾರಿಗಳು ನೆಪಮಾತ್ರಕ್ಕೆ ತಡೆಗೋಡೆ ಹಾಕಿದ್ದರು. ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಮಾಜಿ ಶಾಸಕ ಎ. ಮಂಜು ಓಟಿಗಾಗಿ ಗಿಮಿಕ್ ರಾಜಕಾರಣ ಮಾಡಲು ಬಂದು ಹೋದರೆ ರಸ್ತೆ ಸರಿಪಡಿಸಲು ಆಗಲಿಲ್ಲ. ಮತ್ತೊಮ್ಮೆ ಕೆರೆ ನೀರು ಸಾಗರದಂತೆ ಉಕ್ಕಿ ರಸ್ತೆ ಮೇಲೆ ಹರಿದು ಅಚ್ಚುಕಟ್ಟು ಭಾಗದ ಕೃಷಿ ಭೂಮಿ ಮೇಲೆ ನುಗ್ಗುತ್ತಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಜನರು ತತ್ತರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೊಳ್ಳಂಗಿ, ಹೆಬ್ಬಾಲೆ, ಬೆಳವಾಡಿ, ಬರಗೂರು, ಮುತ್ತಿಗೆ ಸೇರಿದಂತೆ ಸಾಕಷ್ಟು ಭಾಗದಲ್ಲಿ ಕೆರೆಗಳು ತುಂಬಿ ಹರಿದು ಅಚ್ಚುಕಟ್ಟು ಭಾಗದ ಬೆಳೆ ಜಮೀನು ಜಲಾವೃತವಾಗಿದ್ದು ಹಾನಿಗೀಡಾಗಿದೆ. ಮಳೆ ನೀರಿಗೆ ಕೆಲವು ಕಡೆ ರಸ್ತೆಗಳು ಕೊಚ್ಚಿಹೋಗಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ತಾಲೂಕಿನ ಕಂಚೇನಹಳ್ಳಿ, ಚಿಕ್ಕನಹಳ್ಳಿ, ಕೆರೆಕೋಡಿ ಸೇರಿದಂತೆ ಆರು ಮನೆಗಳ ಗೋಡೆ ಕುಸಿದು ಹಾನಿಗೀಡಾಗಿದೆ.


ಆಕ್ರೋಶ:

ಭಾರಿ ಮಳೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿ ಜನರು ಸಂಕಷ್ಟ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.