ಜಿಲ್ಲೆ

ಮಹಾಮನೆ ಕಟ್ಟಿ ಅಸಮಾನತೆ ತೊಲಗಿಸಿದವರು ವಚನಕಾರರು

ಮೈಸೂರು: ವಚನಕಾರರು ಪ್ರಭುತ್ವದ ಅರಮನೆಯ ಮುಂದೆ ಜಂಗಮದ ಮಹಾಮನೆಯನ್ನು ಕಟ್ಟಿ ಅಸಮಾನತೆ ವ್ಯವಸ್ಥೆಯನ್ನು ತೊಲಗಿಸಿದವರು ಎಂದು ಯುವ ವಿಮರ್ಶಕ ಎಚ್.ಡಿ.ಉಮಾಶಂಕರ ಅಭಿಪ್ರಾಯಪಟ್ಟರು.

ಸಂವಾದ ಗೆಳೆಯರ ಬಳಗದ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಗುರುಸ್ವಾಮಿ ಅವರ ‘ಕಲ್ಯಾಣ ಶರಣರ ನೆನೆ ಮನವೇ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ಧಾರ್ಮಿಕ ಚಳವಳಿಯು ಸಮಕಾಲಿನ ಸಮಾಜ ಸಂಸ್ಕೃತಿ ಮತ್ತು ಸಾಹಿತ್ಯದ ಮೇಲೆ ಗಾಢವಾದ ಪ್ರಭಾವ ಬೀರಿದೆ. ಹಿಂದಿನ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳಿಲ್ಲದೆ, ಅಭಿವ್ಯಕ್ತಿಗೂ ಅವಕಾಶವಿಲ್ಲದೆ ಬದುಕು ಸವೆಸಿದ ಮಹಿಳೆಯರು, ಹಿಂದುಳಿದವರು, ದೀನ ದಲಿತರು ಮುಂತಾದವರು ವಚನ ಚಳವಳಿಯಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಅಭಿವ್ಯಕ್ತಿಸಲು ವಚನ ಕಾಲಘಟ್ಟ ಸಹಕಾರಿಯಾಯಿತು ಎಂದರು.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ವಚನ ಸಾಹಿತ್ಯ ಮತ್ತು ಚಳವಳಿಯಲ್ಲಿ ಎಷ್ಟು ಮುಖ್ಯರೂ ಹಾಗೆ ಅಲಕ್ಷಿತ ವಚನಕಾರರಾದ ಹರಳಯ್ಯ, ಮಡಿವಾಳ ಮಾಚಯ್ಯ, ಕುಂಬಾರಗುಂಡಯ್ಯ, ನುಲಿಯ ಚಂದಯ್ಯ, ಕಿನ್ನರಿ ಬೊಮ್ಮಯ್ಯ, ಮೇದರ ಕೇತಯ್ಯ ಅವರು ಅಷ್ಟೇ ಪ್ರಮುಖವಾಗಿದ್ದಾರೆ ಎಂದು ತಿಳಿಸಿದರು.

ಹೊಳೆ ಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಪಿ.ಭಾರತೀದೇವಿ, ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ತ್ರಿವೇಣಿ, ಕಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಕವಿತಾ, ಎಚ್.ಡಿ.ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕೃ.ಪ.ಗಣೇಶ, ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಕುಸುಮಾವತಿ, ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೊಂಬಯ್ಯ ಹೊನ್ನಲಗೆರೆ, ಕೃತಿಕಾರರಾದ ಡಾ.ಗುರುಸ್ವಾಮಿ ಉಪಸ್ಥಿತರಿದ್ದರು.