ಅರಸೀಕೆರೆ: ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಅರಸೀಕೆರೆ ನಗರದ ರಾಮಣ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥಾಪನಾ ದಿನ ಹಾಗೂ ಸುತ್ತೂರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜನ್ಮದಿನವನ್ನು ಆಚರಿಸಲಾಯಿತು.
ಮುಖ್ಯಶಿಕ್ಷಕಿ ಕರಿಯಮ್ಮ ಮಾತನಾಡಿ, ಸಮಾಜದಲ್ಲಿ ಮನೆ ಮಾಡಿದ್ದ ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ, ಶೋಷಣೆಯನ್ನು ತೊಲಗಿಸಲು ಬಸವಾದಿ ಶರಣರು ಕ್ರಾಂತಿಯ ಕಹಳೆ ಮೊಳಗಿಸಿದ್ದರು. ಅಲ್ಲದೆ ಕಾಯಕ ನಿಷ್ಠೆ, ದಾಸೋಹ, ಜಂಗಮ ಸೇವೆಯ ಮಹತ್ವವನ್ನು ಜನಸಮುದಾಯಕ್ಕೆ ಮನದಟ್ಟು ಮಾಡಿಕೊಟ್ಟ ಮಹಾಪುರುಷರ ಚಿಂತನೆ, ತತ್ವಾದರ್ಶಗಳನ್ನು ನಾವೆಲ್ಲರೂ ಅನುಸರಿಸೋಣ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮತನಾಡಿ, ದೇವರ ದಾಸಿಮಯ್ಯ, ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಸಿದ್ದರಾಮೇಶ್ವರರು ಸೇರಿ ಮೊದಲಾದ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ಎಚ್.ಡಿ.ಸೀತಾರಾಮ್, ಮೋಹನ್ ಕುಮಾರ್ ವಚನಕಾರರ ವಚನಗಳು ಮತ್ತು ಕಾಯಕದ ಮಹತ್ವ ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ಡಾ.ಹರೀಶ್ ಕುಮಾರ್, ಸಹಶಿಕ್ಷಕರಾದ ಮಮತಾ, ಚಂದ್ರಪ್ರಭಾ, ಶಶಿಧರ್, ಪ್ರಸನ್ನಕುಮಾರ್ ಇತರರಿದ್ದರು. ವಚನ ಮತ್ತು ವಚನಕಾರರ ಅಂಕಿತನಾಮ ಕುರಿತು ಉತ್ತರಿಸಿದ ವಿದ್ಯಾರ್ಥಿಗಳಿಗೆ ವಚನಗಳ ಕಿರುಹೊತ್ತಿಗೆ ವಿತರಿಸಲಾಯಿತು.