ಜಿಲ್ಲೆ

ಮಹಾನ್ ವ್ಯಕ್ತಿಗಳ ಕುರಿತು ಅಧ್ಯಯನ ಅಗತ್ಯ

ಎ.ಎಸ್.ಮಣಿಕಂಠ

ಚಾಮರಾಜನಗರ: ದೇಶಕ್ಕೆ ಸಮಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಅಧ್ಯಯನ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದು ಚಂದಕವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವಿತದ ಅರ್ಧ ಆಯ್ಯುಷ್ಯವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿದ್ದರು. ದೇಶಕ್ಕೆ ಸಂವಿಧಾನ ಬರೆಯುವುದು ಅಷ್ಟು ಸುಲಭವಾಗಿರಲಿಲ್ಲ, ಆದರೇ ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ರಚನೆಯಾದ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಪ್ರಸ್ತುತ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ ಎಂದರು.

ದಿನದ 18 ಗಂಟೆಗಳು ಅಧ್ಯಯನ ಮಾಡುತ್ತಿದ್ದ ಅಂಬೇಡ್ಕರ್ ಅವರು ತಮ್ಮ ಮನೆಯಲ್ಲೇ 51 ಸಾವಿರ ಪುಸ್ತಕಗಳನ್ನು ಹೊಂದಿದ್ದ ಜಗತ್ತಿನ ಏಕೈಕ ವ್ಯಕ್ತಿಯಾಗಿದ್ದಾರೆ. ತಮಗಾದ ಅವಮಾನ, ಮುಂದಿನ ತಲೆಮಾರಿಗೆ ಆಗಬಾರದು ಎಂಬ ಉದ್ದೇಶದಿಂದ ಬಹಳ ಶ್ರಮವಹಿಸಿ ಸಂವಿಧಾನ ರಚಿಸಿದರು. ಈ ಮೂಲಕ ದೇಶದ ಪ್ರತಿಯೊಬ್ಬ ಜನರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಕಲ್ಪಿಸಿದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್ ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆಯಿಂದ ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ದೇಶದ ಮಹಾನ್ ಸಾಧಕನ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎ.ಆರ್.ಸುಷ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್ ಹಾಗೂ ಇತರರು ಹಾಜರಿದ್ದರು.

ವಿಜೇತರಿಗೆ ಬಹುಮಾನ ವಿತರಣೆ:

ಡಾ.ಬಿ.ಆರ್.ಅಂಬೇಡ್ಕರ್ ಬದುಕು ಹಾಗೂ ಸಾಧನೆ ಕುರಿತು ಆಯೋಜಿಸಿದ್ದ ರಸಪ್ರಶ್ನೆ, ಕವನ ವಾಚನ, ಪ್ರಬಂಧ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಪಿ.ಸ್ಪೂರ್ತಿ ಪ್ರಥಮ, ಮಧುರ ದ್ವಿತೀಯ ಹಾಗೂ ಐಶ್ವರ್ಯ ತೃತೀಯ ಬಹುಮಾನ ಪಡೆದರು. ಆಶುಭಾಷಣ ಸ್ಪರ್ಧೆಯಲ್ಲಿ ಶಿವಪ್ರಸಾದ್ ಪ್ರಥಮ, ಟಿ.ಆರ್.ಹೇಮಶ್ರೀ ದ್ವಿತೀಯ, ಎಸ್.ಕೀರ್ತನಾ ತೃತೀಯ ಹಾಗೂ ಆರ್.ಸಿಂಧೂ ಸಮಾಧಾನಕರ ಬಹುಮಾನ ಪಡೆದರು. ಕವನ ವಾಚನದಲ್ಲಿ ಎ.ಎನ್.ನಿಧಿಶ್ರೀ ಪ್ರಥಮ, ಪ್ರಿಯಾ ದರ್ಶಿನಿ ದ್ವಿತೀಯ ಹಾಗೂ ಜೆ.ಎಂ.ಸಂಜನಾ ತೃತೀಯ ಬಹುಮಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಆರ್.ದರ್ಶನ್, ಎಂ.ಭುವನೇಶ್ವರಿ, ಟಿ.ಆರ್.ಹೇಮಶ್ರೀ, ಜೆ.ಎಂ.ಸಂಜನಾ, ಎಸ್.ಪಿ.ಸೂರ್ಯ ಪ್ರಥಮ. ಶಿವಪ್ರಸಾದ್, ಎ.ಸಾವಿತ್ರಿ, ಎಸ್.ನಿಶ್ಚಿತಾ, ಮಧುರಾ, ಕೀರ್ತನಾ ದ್ವಿತೀಯ ಹಾಗೂ ಸ್ಪೂರ್ತಿ, ಜ್ಯೋತಿ, ಶ್ರೀಲಕ್ಷ್ಮಿ, ಚಿಕ್ಕದೇವಿ, ಸಿ.ಸಂಜನಾ ತೃತೀಯ ಬಹುಮಾನ ಪಡೆದರು.