ಬಾಗಲಕೋಟೆ: ಸಮಾಜದ ಕೆಳಸ್ತರದಲ್ಲಿ ಹುಟ್ಟಿ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಮನುಕುಲಕ್ಕೆ ಮಾದರಿ ಎನ್ನುವಂತಹ ಕೊಡುಗೆ ನೀಡಿದ ಮಹಾನ್ ಚೇತನ ಡಾ.ಬಾಬು ಜಗಜೀವನರಾಂ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಂ ಅವರ ೧೧೭ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪ ಗೌರವ ಅರ್ಪಿಸಿ ಮಾತನಾಡಿದ ಅವರು ಬಡ ಕುಟುಂಬದಲ್ಲಿ ಹುಟ್ಟಿದ ಜಗಜೀವನರಾಂ ಉಪ ಪ್ರಧಾನ ಮಂತ್ರಿಯವರೆಗೆ ಸಾಗಿ ಬಂದ ದಾರಿ, ಜೀವನ ಮೌಲ್ಯ ಇವತ್ತಿನ ಯುವಜನತೆಗೆ ಅನುಸರಿಸಬೇಗಿದೆ ಎಂದರು.
ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ಜಗಜೀವನರಾಂ ಅವರ ಜೀವನ ಪಾಠವನ್ನು ಹೇಳಿಕೊಟ್ಟಾಗ ಮಾತ್ರ ಸಾಧನೆ ಮಾಡಲು ಸಾದ್ಯವಾಗುತ್ತದೆ. ಎಲ್ಲ ಇದ್ದು ಸಾಧನೆ ಮಾಡುವುದು ದೊಡ್ಡದಲ್ಲಿ ನೀರಾವರಿ ಜಮೀನು ಇದ್ದು ಬತ್ತ ಬೆಳೆಯುವುದು ಕಷ್ಟವಲ್ಲ. ಆದರೆ ಕಷ್ಟ, ತೊಂದರೆ, ಅನುಮಾನಗಳನ್ನು ಅನುಭವಿಸಿ ಮೆಟ್ಟಿ ನಿಂತು ಬೆಳೆದು ತೋರಿಸುವುದು ನಿಜವಾದ ಸಾಧನೆ. ನೀರು ಕುಡಿಯುವಲ್ಲಿ ಜಗಜೀವನರಾಂ ಅವರಿಗೆ ಸಮಾನತೆ ಇರಲಿಲ್ಲ. ತಮಗೆ ಆಗುತ್ತಿರುವ ದೌರ್ಜನ್ಯ, ಕಷ್ಟಗಳು ಮುಂದಿನ ಜನಾಂಗಕ್ಕೆ ಆಗಬಾರದೆಂಬ ದೃಡನಿರ್ಧಾರ ಇಟ್ಟಿಕೊಂಡು ಅವರ ನೈತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರು ಸಾಗಿ ಬಂದ ದಾರಿ ಇಂದಿನ ಯುವಜನತೆಗೆ ಆದರ್ಶವಾದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಂ ಅವರ ಕಂಡಂತಹ ಕಷ್ಟಗಳು, ಹೋರಾಟದ ಬದುಕು ಬೆಳೆದು ಬಂದ ದಾರಿ ಇಂದಿನ ಯುವ ಜನರಿಗೆ ದಾರಿದೀಪವಾಗಿದೆ. ಸ್ವಾಭಿಮಾನ ಭಾರತಕ್ಕಾಗಿ ಆಹಾರ ಸಮತೋಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ್ದರು. ಶೋಷಿತ ಮತ್ತು ದುರ್ಬಲರ ವರ್ಗದವರಿಗೂ ತಮ್ಮ ಜೀವನವನ್ನೇ ಮೀಸಲಾಗಿಟ್ಟಿದ್ದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ ೧೯೭೪ ರಲ್ಲಿ ಸರಕಾರ ಗರಬಿ ಹಟಾವೋ ಜಾರಿಗೆ ತಂದ ಹಿನ್ನಲೆಯಲ್ಲಿ ಅದಕ್ಕೆ ಮೂಲ ಕಾರಣಿ ಕರ್ತರು ಬಾಬುಜಿ. ಭಾರತದಲ್ಲಿರುವ ಆಹಾರ ಪದ್ದತಿ ಉತ್ತೇಜನಗೊಳಿಸುವ ಹಿನ್ನಲೆಯಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟು ಹಾಕಿದರು. ಈ ದಿಶೆಯಲ್ಲಿ ಬಾಬು ಜಗಜೀವನರಾಂ ಅವರನ್ನು ಹಸಿರುಕ್ರಾಂತಿಯ ಹರಿಕಾರರೆಂದು ಕರೆಯಲಾಯಿತು. ದೇಶದ ಸ್ವತಂತ್ರ ಪೂರ್ವ ಹಾಗೂ ನಂತರದ ಸಮಯದಲ್ಲಿ ದೇಶಕ್ಕೆ ಬಾಬುಜಿ ಅವರ ಸೇವೆ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮುದಾಯದ ಬಾಂಧವರು ಉಪಸ್ಥಿತರಿದ್ದರು.