ಜಿಲ್ಲೆ

'ಮಹಾನೀಯರ ಹೆಸರು ಮೊಟಕುಗೊಳಿಸಿ ಹೇಳುವುದು ಸರಿಯಲ್ಲ'

ಮೈಸೂರು: ಮಹಾಪುರುಷರ ಹೆಸರು ಸದಾ ಜನಮಾನಸದಲ್ಲಿ ಇರಬೇಕು ಎನ್ನುವ ಸದುದ್ದೇಶದಿಂದ ನಾಮಕರಣ ಮಾಡಿದರೂ ಅವರ ಹೆಸರನ್ನು ಇನ್ಸಿಯಲ್ ಮೂಲಕ ಚುಟುಕು ಮಾಡಲಾಗುತ್ತಿದೆ ಎಂದು ವಿವೇಕ ವಿದ್ಯಾ ವಾಹಿನಿ ಸ್ಥಾಪಕರಾದ ಚಿಂತಕ ನಿತ್ಯಾನಂದ ವಿವೇಕ ವಂಶಿ ಬೇಸರ ವ್ಯಕ್ತಪಡಿಸಿದರು.
ವೀರ ಸಾವರ್ಕರ್ ಯುವ ಬಳಗದಿಂದ ತಿಲಕನಗರದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾತಂತ್ರೃ ಹೋರಾಟಗಾರ ಬಾಲ ಗಂಗಾಧರ ತಿಲಕರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಮಹನೀಯರ ಹೆಸರು, ಅವರ ಜೀವನ ತಿಳಿಯಲಿ ಎಂದು ನಗರದ ವೃತ್ತಗಳು, ರಸ್ತೆಗಳಿಗೆ ನಾಮಕರಣ ಮಾಡುವುದು ಒಳ್ಳೆಯದೆ ಉದ್ದೇಶವಾಗಿದೆ. ಆದರೆ ಮಹಾನೀಯರ ಹೆಸರನ್ನು ಚುಟುಕುಗೊಳಿಸಿ ಇಂಗ್ಲಿಷ್ ಇನ್ಸಿಯಲ್‌ನಲ್ಲಿ ಚಿಕ್ಕದಾಗಿ ಕರೆಯುವ ಮೂಲಕ ಅರ್ಥಹೀನವಾಗುವಂತಾಗಿದೆ. ಕೃಷ್ಣರಾಜ ವೃತ್ತಕ್ಕೆ ಕೆ.ಆರ್.ವೃತ್ತ, ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯನ್ನು ಜೆಎಲ್‌ಬಿ, ಕೃಷ್ಣದೇವರಾಜ ರಸ್ತೆಯನ್ನು ಕೆ.ಡಿ. ರಸ್ತೆ ಎಂದು ಕರೆಯುವ ಮೂಲಕ ಮೂಲ ಉದ್ದೇಶವೇ ಈಡೇರದಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದೃಷ್ಟವಶಾತ್ ತಿಲಕ್‌ನಗರ ಎಂದು ಹೆಸರಿಟ್ಟಿದ್ದು, ಚಿಕ್ಕದಾಗಿ ಕರೆಯಲು ಆಗುವುದಿಲ್ಲ. ಈ ಹೆಸರಿಟ್ಟವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮಹಾನೀಯರ ಹೆಸರು ಮಂದಿನ ಪೀಳಿಗೆಗೆ ತಿಳಿಯಬೇಕಾದರೆ ಪೂರ್ಣ ಹೆಸರಿನಿಂದ ವೃತ್ತ, ರಸ್ತೆ, ಬಡಾವಣೆಗಳನ್ನು ಕರೆಯಬೇಕು. ಅಲ್ಲದೇ ಅವರ ಜಯಂತಿ ಆಚರಿಸುವ ಮೂಲಕ ಮಹಾಪುರುಷರ ಸ್ಮರಣೆ ಮಾಡಬೇಕಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಟ್ಟು ಸೇರಿಸಿ ಶ್ರಮಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು ತಿಲಕರು. ಆ ಸ್ವಾತಂತ್ರ್ಯ ಕೈತಪ್ಪಿ ಹೋಗದಂತೆ ನಾವೆಲ್ಲ ಜತೆಗೂಡಿ ನೋಡಿಕೊಳ್ಳಬೇಕು. ನಮ್ಮಲ್ಲಿ ಒಡಕು ಉಂಟಾಗದಂತೆ ಎಚ್ಚರ ವಹಿಸಿ ಐಕ್ಯಭಾವದಿಂದ ಬದುಕುವ ಮೂಲಕ ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದರು.
ವೈಯಕ್ತಿಕ ವಿಚಾರಕ್ಕೆ ಕಚ್ಚಾಡದೆ ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲದಿದ್ದರೆ ಮೂರನೇಯುವರು ಬಂದು ಆಕ್ರಮಿಸಿಕೊಂಡು ನಮಗಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಪಾಯವೂ ಬರಬಹುದು ಎಂದು ಎಚ್ಚರಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಬಿದ್ದು ಹೋಗಿರುವ ದೇವಸ್ಥಾನಗಳ ನವೀಕರಣ ಹಾಗೂ ಕಷ್ಟದಲ್ಲಿ ಸಿಲುಕಿರುವ ನಿವಾಸಿಗಳಿಗೆ ಮನೆಕಟ್ಟಿಕೊಡಲು ಬಯಕೆ ವ್ಯಕ್ತಪಡಿಸಿದ್ದಾರೆ. ಧರ್ಮಸಿಂಗ್ ಕಾಲನಿಯಲ್ಲಿ ಬಡವರನ್ನು ಗುರುತಿಸಿ ನಂತರ ಮನೆ ನಿರ್ಮಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸ್ವಾಮೀಜಿಯವರು ಸಮಾಜಕ್ಕೆ ನೀಡುವ ಉಪದೇಶವನ್ನು ತಾವೇ ಪಾಲಿಸಿಕೊಂಡು ಬರುತ್ತಾರೆ. ಒಂದು ಜೀವಿಯು ಬದುಕಬೇಕೆಂಬ ಮನಸ್ಸುಹೊಂದಿರುವ ಶ್ರೀಗಳು 70ಅಡಿ ಬಾವಿಯ ಒಳಗೆ ಸಿಲುಕಿದ್ದ ಬೆಕ್ಕು ಮರಿಯನ್ನು ಸ್ವತಃ ಬಾವಿಗೆ ಇಳಿದು ರಕ್ಷಿಸಿದ್ದಾರೆ. ಮರ ವೇರಿ ಹಲಸಿನ ಹಣ್ಣನ್ನು ಕಿತ್ತು ಭಕ್ತರಿಗೆ ವಿತರಿಸುವ ಮೂಲಕ ಮಠದಲ್ಲಿ ಕೂರದೆ ಜನ ಸಾಮಾನ್ಯರ ಬಳಿ ತೆರಳಿ ಸೇವಾ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಲ್.ನಾಗೇಂದ್ರ, ನಗರಪಾಲಿಕೆ ಸದಸ್ಯ ರಂಗಸ್ವಾಮಿ, ವೀರ ಸಾವರ್ಕರ್ ಯುವ ಬಳಗ ಅಧ್ಯಕ್ಷ ರಾಕೇಶ್ ಭಟ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಜೀವದಾರ ರಕ್ಷಣೆಗೆ ಕೇಂದ್ರದ ನಿರ್ದೇಶಕ ಗಿರೀಶ್, ಬಳಗದ ಉಪಾಧ್ಯಕ್ಷ ಸಂದೇಶ್ ಪವಾರ್, ಕಾರ್ಯದರ್ಶಿ ಎನ್. ದೀಪಕ್, ಸಂಚಾಲಕರಾದ ವಿಕ್ರಂ ಅಯ್ಯಂಗಾರ್‌, ನಿರ್ದೇಶಕರಾದ ಟಿ. ಎಸ್ ಅರುಣ್, ಬಿ. ಸಿ ಶಶಿಕಾಂತ್ ಅಜಯ್ ಶಾಸ್ತ್ರಿ, ಕೆ.ಎಂ. ನಿಶಾಂತ್, ತಿಲಕ್‌ನಗರದ ಮುಖಂಡರಾದ ಶಿವಾಜಿ ರಾವ್, ರಾಜು, ಸ್ವಾಮಿ, ರಾಜೇಂದ್ರ, ಶಂಕರ್, ಶಿವಣ್ಣ, ಗುರುಪ್ರಸಾದ್ ಇತರರು ಇದ್ದರು.