ಜಿಲ್ಲೆ

ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ!

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ 2014ರಿಂದ 2021ರ ನಡುವಿನ ಅವಧಿಯಲ್ಲಿ 217 ಕೋಟಿ ರೂ. ಅವ್ಯವಹಾರ ಕುರಿತು ಮರು ಲೆಕ್ಕಪರಿಶೋಧನೆ ನಡೆಸಲು ಸರ್ಕಾರಕ್ಕೆ ಒತ್ತಾಯಿಸಿ ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಠರಾವು ಕೈಗೊಳ್ಳಲಾಗಿದೆ.

ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ರವಿ ಧೋತ್ರೆ, ಕಳೆದ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಡಳಿತಾಧಿಕಾರ ಅವಧಿಯಲ್ಲಿ 217 ಕೋಟಿ ರೂ. ಖರ್ಚುವೆಚ್ಚ ಕುರಿತು ಆಕ್ಷೇಪಣೆ ಬಂದಿವೆ.

ಇಲ್ಲಿಯವರೆಗೆ ಅವ್ಯವಹಾರ ಮುಚ್ಚಿ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಮರು ಲೆಕ್ಕ ಪರಿಶೋಧನೆ ನಡೆಸಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಮಾತನಾಡಿ, ಆಡಳಿತಾಧಿಕಾರಿ ಅವಧಿಯಲ್ಲಿ ಖರ್ಚುವೆಚ್ಚ ಕುರಿತು ದಾಖಲೆಗಳು, ಆರ್ಥಿಕ ವ್ಯವಹಾರ ಕುರಿತು ಕಳೆದ ಎರಡು ವರ್ಷಗಳಿಂದ ಮಾಹಿತಿ ನೀಡುತ್ತಿಲ್ಲ. ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಣೆಗಳಿದ್ದು, ಅಧಿಕಾರಿಗಳು ಮುಚ್ಚಿ ಹಾಕಿದ್ದಾರೆ. ತನಿಖೆಗೆ ಅನುಮತಿ ಪಡೆದುಕೊಳ್ಳಬೇಕು. ಅವಶ್ಯಬಿದ್ದರೆ ಖಾಸಗಿ ಸಂಸ್ಥೆಯಿಂದ ಲೆಕ್ಕ ಪರಿಶೀಲನೆ ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.

ಪಾಲಿಕೆಯಲ್ಲಿ ಎರಡು ಸ್ಕಾ ೃವೆಂಜರ್ (ಸೆಪ್ಟಿಕ್ ಟ್ಯಾಂಕ್) ವಾಹನಗಳಿಗೆ ಚಾಲಕ, ಕ್ಲೀನರ್ ಸೇರಿ 40 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 1.50 ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದಾಯ 2.40 ಲಕ್ಷ ರೂ. ಮಾತ್ರ ಬರುತ್ತಿದೆ. ಸಹಾಯವಾಣಿಗೆ ದೂರು ನೀಡಿದರೆ ಖಾಸಗಿ ಏಜೆನ್ಸಿಗಳಿಗೆ ಹೋಗುತ್ತಿದ್ದು, ಪಾಲಿಕೆ ಆದಾಯಕ್ಕೆ ಹೊಡೆತ ಬಿದ್ದಿದೆ. ಕೂಡಲೇ ಖಾಸಗಿ ಸ್ಕಾೃವೆಂಜರ್ ವಾಹನಗಳನ್ನು ನಿಯಂತ್ರಿಸಬೇಕು. ಅವುಗಳ ನೋಂದಣಿ ಕಡ್ಡಾಯಗೊಳಿಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪ್ರತಿ ತಿಂಗಳು ಪಾಲಿಕೆಯಿಂದ 100 ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗುತ್ತಿದೆ. ಆದಾಯ ಮಾತ್ರ ಶೂನ್ಯ. ಪಾಲಿಕೆಯಲ್ಲಿ ಆದಾಯಕ್ಕಿಂತ ಖರ್ಚುಗಳು ಅಧಿಕವಾಗುತ್ತಿದ್ದು, ನಿಯಂತ್ರಿಸಬೇಕು. ಒಪ್ಪಿಗೆ ಇಲ್ಲದೆ ಯಾವುದೇ ಕಾಮಗಾರಿಗಳಿಗೆ ಟೆಂಡರ್ ಕರೆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯರು ಎಚ್ಚರಿಸಿದರು.

ಪಾಲಿಕೆ ಆಡಳಿತ ವಿಭಾಗ ಆಯುಕ್ತ ಉದಯಕುಮಾರ ತಳವಾರ ಮಾತನಾಡಿ, ಪಾಲಿಕೆ ವಿವಿಧ ಭಾಗಗಳಲ್ಲಿ ಖಾಲಿ ಉಳಿದಿರುವ 40 ಡೇಟಾ ಎಂಟ್ರಿ ಸಿಬ್ಬಂದಿ ನೇಮಕಾತಿ ಮಾಡಲು ಟೆಂಡರ್ ಕರೆಯಲಾಗಿದ್ದು, ನಾಲ್ಕು ಏಜೆನ್ಸಿಗಳು ಮುಂದೆ ಬಂದಿವೆ. ಅನುಮೋದನೆ ನೀಡಿದ ಬಳಿಕ ಟೆಂಡರ್ ಕರೆಯಲಾಗುವುದು ಎಂದರು.

ಉಪಮೇಯರ್ ವಾಣಿ ಜೋಶಿ, ಸಮಿತಿ ಅಧ್ಯಕ್ಷ ಬ್ರಹ್ಮಾನಂದ ಮಿರಜಕರ್, ಸದಸ್ಯರಾದ ರವಿರಾಜ ಸಾಂಬ್ರೇಕರ, ನೇತ್ರಾವತಿ ಭಾಗವತ, ವೀಣಾ ವಿಜಾಪುರೆ, ಶಿವಾಜಿ ಮಂಡೋಳಕರ, ಅಸ್ಮಿತಾ ಪಾಟೀಲ, ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ ಇತರರಿದ್ದರು.