ಕಾರವಾರ:ಬಾಡ ಮಹಾದೇವ ದೇವಸ್ಥಾನದ ಜಾತ್ರಾ ಮಹೋತ್ಸವವು ನ.27 ಹಾಗೂ 28 ರಂದು ಜರುಗಲಿದೆ.
ನ.27 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ತುಲಾಭಾರ ಸೇವೆ, ಮಧ್ಯಾಹ್ನ 1 ಗಂಟೆಗೆ ಪೂಜೆ ನಡೆಯಲಿದೆ. ನಂತರ ದೇವರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯು ಹಬ್ಬುವಾಡ ಮಹಾ ಗಣಪತಿ ದೇವಸ್ಥಾನಕ್ಕೆ ವನಭೋಜನಕ್ಕೆ ತೆರಳುವುದು. ದೇವರ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ ಮುಗಿಸಿದ ನಂತರ ಸಾಯಂಕಾಲ 6 ಗಂಟೆಗೆ ವನಭೋಜನ ನಡೆಯಲಿದೆ. ರಾತ್ರಿ 9 ಗಂಟೆಗೆ ದೇವರ ರಥವು ಗಣಪತಿ ದೇವಸ್ಥಾನದಿಂದ ಹೊರಟು ಅಹೋ ರಾತ್ರಿ ನಗರದಲ್ಲಿ ಸಂಚರಿಸುವುದು. ನ.28 ರ ಬೆಳಗಿನ ಜಾವ ರಥ ಮಹಾದೇವ ದೇವಸ್ಥಾನ ತಲುಪಲಿದ್ದು, ಅಲ್ಲಿ ಪಾರಂಪರಿಕ ಪೂಜಾ ಕೈಂಕರ್ಯಗಳು ಜರುಗಲಿವೆ.
ನ.28 ರಂದು ಮಧ್ಯಾಹ್ನ 3 ಗಂಟೆಯಿಂದ ಕೋಡಿಬಾಗ ಭಕ್ತ ವೃಂದದಿಂದ ಕೋಲಾಟ, ನಂತರ ದಹಿಂಕಾಲ ಉತ್ಸವ ನಡೆಯಲಿದೆ. ಪಲ್ಲಕ್ಕಿಯಲ್ಲಿ ದೇವರನ್ನು ಅವಬೃತ ಸ್ನಾನಕ್ಕೆ ಕೊಂಡೊಯ್ಯಲಾಗುವುದು. ರಾತ್ರಿ 9 ರ ನಂತರ ಪಲ್ಲಕ್ಕಿ ವಾಪಸಾಗಲಿದ್ದು, ದೇವಸ್ಥಾನದಲ್ಲಿ ಅಷ್ಟಾವಧಾನ ಸೇವೆಗಳು ಜರುಗಲಿವೆ. ಫಲಾವಳಿಗಳ ಹರಾಜಿನ ನಂರ ರಾತ್ರಿ ತಂಗಿ ನೀಡಿದ ಶಿಕ್ಷೆ, ಅಣ್ಣ ಬೇಡಿದ ಭಿಕ್ಷೆ ಎಂಬ ನಾಟಕ ಪ್ರದರ್ಶನ ನಡೆಯಲಿದೆ.