ಜಿಲ್ಲೆ

ಮಹಾತ್ಮರ ದರ್ಶನದಿಂದ ಪುಣ್ಯ ಪ್ರಾಪ್ತಿ: ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

ಮೈಸೂರು: ಮಹಾತ್ಮರ ದರ್ಶನ ಮಾತ್ರದಿಂದಲೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಬೇಬಿ ಗ್ರಾಮದ ದುರ್ದಂಡೇಶ್ವರ ಮಠ ಹಾಗೂ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು

ನಗರದ ಸುತ್ತೂರು ಮಠದಲ್ಲಿ ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಪ್ರವಚನದ ಸಮಾರೋಪ ಹಾಗೂ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು

ಭಾರತ ಮಹಾತ್ಮರ ದೇಶ. ಭರತಭೂಮಿ ಒಂದು ದೇವಾಲಯವಿದ್ದಂತೆ. ನಮ್ಮ ದೇಶದ ಮಹಾತ್ಮರ ಮುಂಚೂಣಿ ಸಾಲಿನಲ್ಲಿ ರಾಜೇಂದ್ರ ಶ್ರೀಗಳು ಚೈತನ್ಯ ಸ್ವರೂಪಿಗಳಾಗಿ ಕಾಣುತ್ತಾರೆ. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಆಲಿಸಬೇಕು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ಅಂತಹ ಅವಕಾಶವನ್ನು ಸುತ್ತೂರು ಮಠ ಕಲ್ಪಿಸಿಕೊಟ್ಟಿದೆ. ಇಂತಹ ಪ್ರವಚನ ಕಾರ್ಯಕ್ರಮಗಳಿಗೆ ಪಾಲಕರು ಮಕ್ಕಳನ್ನು ಕರೆತರಬೇಕು. ಆಗಮಾತ್ರ ಅವರು ನಮ್ಮ ಸಂಸ್ಕೃತಿಯನ್ನು ಅರಿಯಲು ಸಾಧ್ಯ. ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಕೃಷ್ಣರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಗಂಗಾಧರಸ್ವಾಮಿ ಮಾತನಾಡಿ, ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಬಸವಣ್ಣ ಅವರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎಂಬ ಅವರ ಸಪ್ತಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಅಶಾಂತಿ, ಸಂಘರ್ಷಗಳು ಇರುವುದಿಲ್ಲ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಮಾತನಾಡಿ, ರಾಜೇಂದ್ರ ಶ್ರೀಗಳು ಸಮಾಜಕ್ಕಾಗಿ ಬದುಕಿದವರು. ತಮ್ಮ ಬದುಕನ್ನು ಕಾಯಕದ ಮೂಲಕವೇ ಸಾರ್ಥಕಗೊಳಿಸಿಕೊಂಡ ಧ್ರುವನಕ್ಷತ್ರ ರಾಜೇಂದ್ರ ಶ್ರೀಗಳು. ಪಂಚ ದಾಸೋಹದ ಮೂಲಕ ಸಮಾಜದ ಉದ್ಧಾರ ಮಾಡಿದರು ಎಂದು ಹೇಳಿದರು.

ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಜೀವನದಲ್ಲಿ ಆತ್ಮೋದ್ಧಾರದ ಸಂಗತಿ ಹುಡುಕಬೇಕು. ನಾಡಿನ ಎಲ್ಲ ಮಠಗಳು ಶರಣ ಸಂಸ್ಕೃತಿಯನ್ನು ಸದಾ ಜಾಗೃತಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ತಿಳಿಸಿದರು.

ಶ್ರಾವಣ ಮಾಸದ ಪೂಜಾನುಷ್ಠಾನದ ಕುರಿತು ಮಾತನಾಡಿದ ಹುಲಿಯೂರುದುರ್ಗ ಮಠದ ಶ್ರೀ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಪರಂಪರೆಯಿಂದ ಬಂದ ಆಚರಣೆಗಳನ್ನು ಅನುಸರಿಸಿಕೊಂಡು ಹೋಗುವುದೇ ಪೂಜಾನುಷ್ಠಾನ. ಮಾಸದಾದ್ಯಂತ ನಸುಕಿನ ಜಾವ ಇಷ್ಟಲಿಂಗ ಪೂಜೆಯಲ್ಲಿ ತೊಡಗಿದ್ದುದು ಅತ್ಯಂತ ಆನಂದ ಮತ್ತು ಹೊಸಚೈತನ್ಯವನ್ನು ನೀಡಿತು ಎಂದರು.
ಒಂದು ತಿಂಗಳ ಕಾಲ ಪ್ರವಚನದ ಸಾರವನ್ನು ಆಲಿಸಿ ಪ್ರಬಂಧವನ್ನು ಬರೆದಿದ್ದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.