ಜಿಲ್ಲೆ

ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ಪ್ರದಾನ

ದಾವಣಗೆರೆ: ಯಾವುದೇ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರವೇ ಮರ್ಯಾದೆ ಸಿಗಲಿದೆ ಎಂದು ಮಾಜಿ ಶಾಸಕ ಮಹಿಮ ಪಟೇಲ್ ಹೇಳಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ವೃತ್ತಿಯಲ್ಲಿ ಸೇವಾ ಭಾವವಿದ್ದಲ್ಲಿ ಕರುಣೆ, ಜೀವ ತುಂಬಿರುವ ಕರ್ನಾಟಕ ಕಟ್ಟಲು ಸಾಧ್ಯ ಎಂದು ಹೇಳಿದರು.

ರಾಜಕಾರಣಿ, ವಕೀಲ, ವೈದ್ಯ, ಪತ್ರಕರ್ತ ಸೇರಿ ಎಲ್ಲರಲ್ಲೂ ಹಣದ ಭೂತ ಬೆನ್ನು ಹತ್ತಿದೆ. ಎಲ್ಲರೂ ಭದ್ರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೇವೆ ಹಿನ್ನೆಲೆಯಾಗಿ ಕೆಲಸ ಮಾಡಿದರೆ ಅದು ರಾಜಕಾರಣವಲ್ಲ ಎಂಬ ಚಿಂತನೆಗೆ ಬಂದಿದ್ದೇವೆ ಎಂದರು.

ಎಲ್ಲರೂ ಸ್ವಕುಟುಂಬ, ಸ್ವಜಾತಿ ಆಲೋಚನೆ ಮಾಡುತ್ತಾರೆ. ಆದರೆ ಸರ್ವೇಜನೋ ಸುಖಿನೋಭವಂತು, ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದು ಯೋಚನೆ ಮಾಡುವವರು ಕಡಿಮೆ. ದೈಹಿಕ ಶ್ರಮವಿಲ್ಲದೆ ಸುಲಭವಾಗಿ ಹಣ ಮಾಡುವವರೇ ಹೆಚ್ಚಿದ್ದಾರೆ ಎಂದು ವಿಷಾದಿಸಿದರು.

ನಮ್ಮ ನಡುವೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆಲೋಚನೆಗಳ ಕ್ಷೇತ್ರಗಳೂ ಇವೆ. ಹಿಟ್ಲರ್, ಮುಸಲೋನಿ ಅವರ ಆಲೋಚನೆಗಳೂ ಇವೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ಹೇಳಿದರು.

ಚನ್ನಗಿರಿ ತಾಲೂಕಿನಲ್ಲಿ ಹಸುವೊಂದು ಚಿರತೆಯಿಂದ ತನ್ನ ಮಾಲೀಕನನ್ನು ಪಾರು ಮಾಡಿದ ಸುದ್ದಿ ವರದಿಯಾಗಿದೆ. ಪ್ರಾಣಿಗಳು ಕಷ್ಟದಲ್ಲಿದ್ದಾಗ ಸ್ಪಂದಿಸುವ ಪ್ರಾಣಿಗಳ ಗುಣ ಮಾನವರಲ್ಲಿ ಇಲ್ಲವಾಗಿದೆ ಎಂದು ವಿಷಾದಿಸಿದರು.

ಮಾಧ್ಯಮ ಜನರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪಿ.ಲಂಕೇಶ್ ಲೇಖನಗಳ ಪರಿಣಾಮ ಆಗಿನ ಸರ್ಕಾರವೇ ಬದಲಾಯಿತು. ಇಂದು ಮಾಧ್ಯಮದವರು ಉಳಿದುಕೊಳ್ಳುವ ಚಿಂತನೆಯ ನಡುವೆ ಅಂದಿನ ಸ್ವಾತಂತ್ರ್ಯ ಇಂದು ಮಾಯವಾಗಿದೆ ಎಂದು ಹೇಳಿದರು.

ಪತ್ರಕರ್ತ ಸಿದ್ದಯ್ಯ ಹಿರೇಮಠ ಮಾತನಾಡಿ ಮಾಧ್ಯಮಗಳು ಶೇ. 90ರಷ್ಟು ಸಕಾರಾತ್ಮಕ ಕಾರ್ಯಗಳ ಬದಲಾಗಿ ಶೇ.10ರಷ್ಟು ಇರುವ ನಕಾರಾತ್ಮಕ ಕಾರ್ಯಗಳನ್ನೇ ವೈಭವೀಕರಿಸುತ್ತಿವೆ. ಹಗರಣ, ಅಪರಾಧ, ರಾಜಕೀಯ ವಾದವಿವಾದಗಳಿಗೆ ಆದ್ಯತೆ ನೀಡುವ ಬದಲು ಒಳ್ಳೆಯ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎನ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಇದ್ದರು.

ಪತ್ರಕರ್ತ ಎ.ಎಲ್.ತಾರಾನಾಥ್, ಛಾಯಾಗ್ರಾಹಕ ವಿವೇಕ್ ಎಲ್. ಬದ್ದಿ, ಎಂ.ನಾಗರಾಜ್, ಬುಡೇನ್ ಸಾಬ್ ಹಾಗೂ ಪತ್ರಿಕಾ ವಿತರಕ ಎ.ಕೆ. ಶಿವಬಸಪ್ಪ ಅವರಿಗೆ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.